ಬೆಂಗಳೂರು/ಮಂಗಳೂರು : ಸಮುದಾಯವಾರು ಮೂವರು ಡಿಸಿಎಂ ಆಗಬೇಕೆನ್ನುವ ವಿಚಾರದಲ್ಲಿ ತಪ್ಪೇನಿದೆ?. ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಮುಂದೆ ಪ್ರಸ್ತಾಪ ಮಾಡಿದ್ದೇನೆ. ಮುಂದಿನ ನಿರ್ಧಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿದ್ದಾರೆ. ಕುಮಾರಕೃಪ ಅತಿಥಿ ಗೃಹದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ಗೆ ಸರಿ ಅನ್ನಿಸಿದರೆ ಮಾಡುತ್ತಾರೆ. ಬೇಡ ಅಂದರೆ ಬಿಡುತ್ತಾರೆ. ಸಿದ್ದರಾಮಯ್ಯ ಅವರು ಈ ಮಾತನ್ನು ನನ್ನಿಂದ ಹೇಳಿಸುತ್ತಿದ್ದಾರೆ ಅನ್ನುವುದು ತಪ್ಪು. ನಾನು ಈ ವಿಚಾರವಾಗಿ ಸಿದ್ದರಾಮಯ್ಯರನ್ನು ಭೇಟಿ ಮಾಡೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹೆಚ್ಚು ಡಿಸಿಎಂ ಮಾಡಿದರೆ ಡಿ.ಕೆ ಶಿವಕುಮಾರ್ ಅವರಿಗೆ ಪ್ರಾಮುಖ್ಯತೆ ಕಡಿಮೆ ಮಾಡಲಾಗುತ್ತದೆ ಅನ್ನೋದು ತಪ್ಪು. ಲೋಕಸಭೆ ಚುನಾವಣೆ ಬಹಳ ಮುಖ್ಯವಾದದ್ದು. ಅದರ ಗೆಲುವಿಗಾಗಿ ಈ ಸೂತ್ರ ಹೇಳಿದ್ದೇನೆಯೇ ಹೊರತು, ಬೇರೆ ಯಾವ ಉದ್ದೇಶ ಇಲ್ಲ. ಇವತ್ತಿನ ಚುನಾವಣಾ ವ್ಯವಸ್ಥೆ ನೋಡಿದಾಗ ಜಾತಿ ಬಹಳ ಪ್ರಾಮುಖ್ಯತೆ ವಹಿಸುತ್ತಿದೆ. ಆದ್ದರಿಂದ ಸಮುದಾಯವಾರು ಮೂವರು ಡಿಸಿಎಂ ಇದ್ದರೆ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ. ನಾನು ನನ್ನ ಅಭಿಪ್ರಾಯಕ್ಕೆ ಯಾವ ಚಾಲೆಂಜ್ ಬೇಕಾದರೂ ಎದುರಿಸಲು ಸಿದ್ಧನಿದ್ದೇನೆ. ನನ್ನ ಹೇಳಿಕೆಯಿಂದ ನಾನು ದೂರ ಸರಿಯುವ ಮಾತಿಲ್ಲ ಎಂದು ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆ ಬಳಿಕ ಕೆಲವೊಮ್ಮೆ ಸರ್ಕಾರಗಳನ್ನೇ ವಿಸರ್ಜನೆ ಮಾಡಿದ ಉದಾಹರಣೆ ಇದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಡಿ ಜತ್ತಿ, ರಾಮಕೃಷ್ಣ ಹೆಗಡೆ ಕಾಲದಲ್ಲೆಲ್ಲ ಇದು ನಡೆದಿದೆ. ಈಗಲೂ ಹಾಗೇ ಆಗೋದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನಿದೆ?. ಹೀಗಾಗಿ ಸಮುದಾಯವಾರು ಡಿಸಿಎಂ ಸ್ಥಾನ ನೀಡಬೇಕು. ಡಿ.ಕೆ. ಶಿವಕುಮಾರ್ ಹೇಳಿಕೆಗೆ ನಾನು ವಿರೋಧಿಸುವುದೂ ಇಲ್ಲ, ಸಹಮತವೂ ಇಲ್ಲ ಎಂದರು.
ಸಿ ಟಿ ರವಿ ವಿರುದ್ಧ ಗುಂಡೂರಾವ್ ವಾಗ್ದಾಳಿ : ರಾಜ್ಯದಲ್ಲಿ ಮೂವರು ಡಿಸಿಎಂ ಆಗಬೇಕೆಂಬ ಚರ್ಚೆ ದೊಡ್ಡ ವಿಚಾರವಲ್ಲ, ಪ್ರತಿಯೊಂದು ವಿಚಾರದ ಬಗ್ಗೆಯೂ ಅನಾವಶ್ಯಕವಾಗಿ ಮಾತನಾಡುವುದು ಮಾಜಿ ಶಾಸಕ ಸಿ ಟಿ ರವಿ ಅವರಿಗೆ ಒಂದು ಚಟ ಆಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ ಟಿ ರವಿ ಅವರು ಈ ಹಿಂದೆ ಕೂಡ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ವಿರುದ್ಧ ಮಾತನಾಡಿ ಸೋತರು. ಮೂವರು ಡಿಸಿಎಂ ದೊಡ್ಡ ವಿಚಾರವಲ್ಲ. ಈ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಒಡಕು ಇಲ್ಲ. ಕೆಲವರ ಅಭಿಪ್ರಾಯ ಬೇರೆ ಇರಬಹುದು. ಸರಿಯಾದ ನಿರ್ಧಾರವನ್ನು ಹೈಕಮಾಂಡ್ ಮಾಡುತ್ತದೆ. ಸಿ ಟಿ ರವಿಯವರು ಪ್ರತಿಯೊಂದು ವಿಚಾರದಲ್ಲಿ ಯಾಕೆ ಅನಾವಶ್ಯಕವಾಗಿ ಮಾತನಾಡುತ್ತಾರೋ ಗೊತ್ತಿಲ್ಲ. ಅವರ ಕ್ಷೇತ್ರದಲ್ಲಿ ಸೋತರು, ದೆಹಲಿಯಿಂದ ಅವರನ್ನು ವಾಪಸ್ ಕಳುಹಿಸಿದ್ದಾರೆ. ಪ್ರತಿಯೊಂದರ ಬಗ್ಗೆಯೂ ಮಾತಾಡುವುದು ಅವರಿಗೆ ಚಟವಾಗಿದೆ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ ಬಗ್ಗೆ ಪ್ರತಿಕ್ರಿಯಿಸಿ, ಹುಕ್ಕಾ ಬಾರ್ಗಳಿಂದ ತೊಂದರೆ ಆಗ್ತಿದೆ. ಸಾರ್ವಜನಿಕರಿಗೆ ಅನಾರೋಗ್ಯ ಆಗುತ್ತಿದೆ. ನಾವು ಕಾಯ್ದೆಗೆ ತಿದ್ದುಪಡಿ ಮಾಡಿ ಬದಲಾವಣೆ ತರಲು ಬಯಸಿದ್ದೇವೆ. ಹುಕ್ಕಾ ಬಾರ್ಗಳು ಬೇರೆ ಬೇರೆ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಅದರಲ್ಲಿ ಬೇರೆ ಮಿಶ್ರಣ ಮಾಡಿ ಹಾಕುವಂಥದ್ದು ಇದೆ. ಇಂಥದ್ದನ್ನು ನಿಯಂತ್ರಣ ಮಾಡೋದು ಬಹಳ ಕಷ್ಟ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅದು ಇರಬಾರದು. ಬಾರ್, ರೆಸ್ಟೋರೆಂಟ್ಗಳಲ್ಲಿ ಅದು ಇರಬಾರದು ಎಂದು ಹೇಳಿದರು.
ಕಾವೇರಿ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ. ವಸ್ತುಸ್ಥಿತಿ ಅಧ್ಯಯನ ಮಾಡಿ ರಿಯಾಲಿಟಿ ಮೇಲೆ ಹೋಗಬೇಕಿದೆ. ಮಳೆ ಕೂಡ ಕಡಿಮೆಯಾಗಿ ನಮ್ಮಲ್ಲೇ ನೀರು ಇಲ್ಲ. ರಾಜಕೀಯವಾಗಿಯೂ ಎಲ್ಲರೂ ಒಗ್ಗಟ್ಟಾಗಿ ಚರ್ಚಿಸೋಣ. ಸಂಸದರು ದೆಹಲಿಯಲ್ಲಿ ಮಾತನಾಡಬೇಕು. ಸಿಎಂ ಪ್ರಧಾನಿ ಮೋದಿಯವರ ಬಳಿ ಸಮಯ ಕೇಳಿದ್ದಾರೆ. ಕೋರ್ಟ್ಗಳು ಆದೇಶ ಕೊಡುತ್ತವೆ. ಆದರೆ ಕೆಲ ವಿಚಾರಗಳಲ್ಲಿ ಜನರ ಪರ ನಿಲ್ಲಬೇಕಿದೆ. ಇಂದು ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ. ಅಲ್ಲಿನ ಅಭಿಪ್ರಾಯವನ್ನು ಕೇಂದ್ರಕ್ಕೆ ತಿಳಿಸಲಾಗುತ್ತದೆ ಎಂದರು.
ಇದನ್ನೂ ಓದಿ : ಕಾವೇರಿ ವಿಚಾರದಲ್ಲಿ ಸರ್ವಪಕ್ಷ ಸಂಸದರ ಬೆಂಬಲ ಸಿಕ್ಕಿದೆ; ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುವ ಭರವಸೆ ಇದೆ: ಡಿ.ಕೆ.ಶಿವಕುಮಾರ್