ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಆರಂಭವಾಗಿದೆ. ಎಳೆ ವಯಸ್ಸಿನ ಮಕ್ಕಳಿಗೆ, ಯುವ ಸಮೂಹಕ್ಕೆ ಪಟಾಕಿ, ದೀಪ ಹಚ್ಚುವ ಸಂಭ್ರಮವಾದ್ರೆ, ಹಿರಿಯರಿಗೆ ಪೂಜೆ, ಹಬ್ಬದ ಕ್ರಮಗಳು, ವಿಶೇಷ ಊಟ ತಿಂಡಿಯೇ ಹಬ್ಬದ ದಿನಗಳ ಸಂಭ್ರಮ.
ಹಬ್ಬದ ಹಿನ್ನೆಲೆಯನ್ನು ತಿಳಿದು ಆಚರಿಸಿದರೆ ಇನ್ನಷ್ಟು ಆಚರಣೆ ಅರ್ಥಪೂರ್ಣವಾಗುವುದರಲ್ಲಿ ಎರಡು ಮಾತಿಲ್ಲ. ದೀಪಾವಳಿಯ ವಿಶೇಷತೆಗಳೇನು, ಯಾವ ರೀತಿ ಆಚರಿಸಬೇಕೆಂದು ಖ್ಯಾತ ಜ್ಯೋತಿಷಿಗಳಾದ ಪ್ರೊ.ವಿಜಯಕುಮಾರ್ ಟಿ.ಆರ್ ಅವರು ಮಾತನಾಡಿದ್ದಾರೆ.
ಮೂರು ದಿನ ಆಚರಿಸುವ ಹಬ್ಬ ದೀಪಾವಳಿ:
ಮೂರು ದಿನಗಳ ಕಾಲ ಆಚರಿಸುವ ಹಬ್ಬ ದೀಪಾವಳಿ. ಕಾಮ್ಯ ಫಲದಾಯಕ ಹಬ್ಬ. ಐಭೋಗಕ್ಕೆ ಬೇಕಾದ ಎಲ್ಲಾ ವಸ್ತುಗಳಿಗೆ ಮಹಾಲಕ್ಷ್ಮಿ ಕಾರಣರಾಗುತ್ತಾಳೆ. ಇದ್ರ ಜೊತೆಗೆ ಆರೋಗ್ಯ ಹಾಗೂ ಪಾಪಗಳನ್ನು ಕಡಿಮೆ ಮಾಡುವ ಮೂರು ಬೇಡಿಕೆಗಳನ್ನು ಒದಗಿಸುವ ಹಬ್ಬ ದೀಪಾವಳಿ. ಇಂದು ನರಕಚತುರ್ದಶಿ, ಎರಡನೇ ದಿನ ಅಮಾವಾಸ್ಯೆ ಹಾಗೂ ಮೂರನೇ ದಿನ ಬಲಿಪಾಡ್ಯಮಿ ಎಂದು ಆಚರಿಸುತ್ತೇವೆ ಎಂದರು.
ಅಭ್ಯಂಗ ಸ್ನಾನ ಮಾಡುವುದೇಕೆ?
ಇನ್ನು ಪ್ರಥಮ ದಿನ ನರಕಚತುರ್ದಶಿಯಂದು ಅಭ್ಯಂಗ ಸ್ನಾನ ಮಾಡುತ್ತಾರೆ. ಇದನ್ನು ಶ್ರೀಕೃಷ್ಣ ನರಕಾಸುರನ ವಧೆಯ ಬಳಿಕ ರಕ್ತ ಮೈಮೇಲೆ ಚಿಮ್ಮಿದ್ದರಿಂದ ತೊಳೆದುಕೊಳ್ಳಲು ಮಾಡಿದ ಅಭ್ಯಂಗ ಸ್ನಾನ, ಹೀಗಾಗಿ ನರಕಾಸುರ ವಧೆಯಾದ ದಿನ ಎಲ್ಲರೂ ಅಭ್ಯಂಗ ಸ್ನಾನ ಮಾಡಬೇಕೆಂಬುದು ಪ್ರತೀತಿ. ಅಮಾವಾಸ್ಯೆಯಂದು ಧನಲಕ್ಷ್ಮಿ ಪೂಜೆಯನ್ನು ಸಂಜೆ ಸಮಯದಲ್ಲಿ ಮಾಡಲಾಗುತ್ತದೆ. ಸಂಜೆ 6-45 ರಿಂದ 8 ಗಂಟೆಯವರೆಗೆ ಮಾಡಬಹುದಾಗಿದೆ, ಇದರಿಂದ ಲಕ್ಷ್ಮಿ ಸ್ಥಿರವಾಗಿ ನೆಲೆಸುತ್ತಾಳೆ ಎಂದರು.
ಅಭ್ಯಂಗ ಸ್ನಾನ ಯಾವಾಗ ಮಾಡಬೇಕು?
ಬಲಿಪಾಡ್ಯಮಿ ದಿನದಂದು ಸೂರ್ಯೋದಯಕ್ಕೆ ಮೊದಲು ಬ್ರಾಹ್ಮೀ ಮುಹೂರ್ತದಲ್ಲಿ ಅಭ್ಯಂಗ ಸ್ನಾನ ಮಾಡಬೇಕು. ಮೂರು ದಿನವೂ ಅಭ್ಯಂಗ ಸ್ನಾನ ಮಾಡುವ ವಾಡಿಕೆ ಇದೆ. ಇದು ಆರೋಗ್ಯವನ್ನು ತಂದುಕೊಡುತ್ತದೆ. ಬಲಿಪಾಡ್ಯಮಿಯಂದು ಮಧ್ಯಾಹ್ನ 12 ಗಂಟೆಯೊಳಗೆ ಎಲ್ಲರೂ ಶುಭಕಾರ್ಯಗಳನ್ನು ಮಾಡಬಹುದಾಗಿದೆ ಎಂದರು.