ಬೆಂಗಳೂರು: ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಪ್ರತಾಪ್ ಗೌಡ ಪಾಟೀಲ್ಗೆ ಮಸ್ಕಿ ಉಪಚುನಾವಣಾ ಫಲಿತಾಂಶ ಶಾಕ್ ನೀಡಿದೆ. ಸಚಿವ ಸ್ಥಾನವೂ ಇಲ್ಲ, ನಿಗಮ ಮಂಡಳಿಯೂ ಸಿಗದ ಸಂದಿಗ್ಧ ಸ್ಥಿತಿಗೆ ಪಾಟೀಲ್ ತಲುಪಿದ್ದಾರೆ. ಮುಂದಿನ ರಾಜಕೀಯ ಭವಿಷ್ಯವೂ ಡೋಲಾಯಮಾನವಾಗಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಪ್ರತಾಪ್ ಗೌಡ ಪಾಟೀಲ್ಗೆ ಸದ್ಯಕ್ಕೆ ಸಚಿವ ಸ್ಥಾನ ಅಲಂಕರಿಸುವ ಯೋಗವಿಲ್ಲ. ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರಲ್ಲಿ ಪ್ರತಾಪ್ ಗೌಡ ಪಾಟೀಲ್ ಮೂರನೆಯವರು. 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಹೊಸಕೋಟೆಯಿಂದ ಸ್ಪರ್ಧೆ ಮಾಡಿದ್ದ ಎಂಟಿಬಿ ನಾಗರಾಜ್ ಪರಾಜಿತಗೊಂಡರೆ, ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಹೆಚ್.ವಿಶ್ವನಾಥ್ ಕೂಡ ಸೋತಿದ್ದರು. ಇದೀಗ ಪ್ರತಾಪ್ ಗೌಡ ಪಾಟೀಲ್ ಕೂಡ ಪರಾಜಿತರಾಗಿದ್ದಾರೆ.
ಆದರೆ, ಎಂಟಿಬಿ ನಾಗರಾಜ್ ಸೋಲಿಗೆ ಬಿಜೆಪಿ ಬಂಡಾಯ ಅಭ್ಯರ್ಥಿ ಪಕ್ಷೇತರರಾಗಿ ಕಣಕ್ಕಿಳಿದಿದ್ದು ಕಾರಣ ಎನ್ನುವುದಕ್ಕಾಗಿ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಚುನಾಯಿಸಿ ಅವರನ್ನು ಸಚಿವರನ್ನಾಗಿ ಮಾಡಲಾಯಿತು. ಆದರೆ, ವಿಶ್ವನಾಥ್ ಪಾಲಿಗೆ ಆ ನಿಯಮ ಅನ್ವಯವಾಗಲಿಲ್ಲ. ಆದರೂ, ಸಿಎಂ ಯಡಿಯೂರಪ್ಪ ಪರಿಷತ್ಗೆ ನಾಮನಿರ್ದೇಶನ ಮಾಡುವ ಮೂಲಕ ವಿಶ್ವನಾಥ್ಗೆ ಸಚಿವ ಸ್ಥಾನ ನೀಡುವ ಸುಳಿವು ನೀಡಿದ್ದರು. ಆದರೆ, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಅದನ್ನು ಅಲ್ಲಿಗೆ ಕೈಬಿಟ್ಟರು. ಇದರಿಂದಾಗಿ ವಿಶ್ವನಾಥ್ ಕೇವಲ ಎಂಎಲ್ಸಿ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಇದೀಗ ಪ್ರತಾಪ್ ಗೌಡ ಪಾಟೀಲ್ ಸರದಿ.
ಸಚಿವ ಸ್ಥಾನದ ಕನಸು ಭಗ್ನ:
ಚುನಾವಣೆಯಲ್ಲಿ ಸೋತಿರುವ ಕಾರಣಕ್ಕೆ ಪಾಟೀಲ್ಗೆ ಸಚಿವ ಸ್ಥಾನದ ಅವಕಾಶ ಬಹುತೇಕ ಮುಚ್ಚಿದೆ. ನಿಗಮ, ಮಂಡಳಿಯೂ ಸಾಧ್ಯವಿಲ್ಲ. ಹೆಚ್ಚೆಂದರೆ ಪರಿಷತ್ಗೆ ನಾಮ ನಿರ್ದೇಶನ ಮಾಡಿ ಸ್ಥಾನ ನೀಡಬಹುದೇ ಹೊರತು, ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಸಚಿವ ಸ್ಥಾನ ಅಥವಾ ನಿಗಮ ಮಂಡಳಿ ಸ್ಥಾನ ನೀಡಬೇಕಾದರೆ ಒಂದು ಶಾಸಕರಾಗಬೇಕು, ಇಲ್ಲವೇ ವಿಧಾನ ಪರಿಷತ್ಗೆ ಚುನಾಯಿತರಾಗಿರಬೇಕು. ಸದ್ಯ ವಿಧಾನಸಭೆಯಿಂದ ವಿಧಾನಪರಿಷತ್ಗೆ ಚುನಾವಣೆ ಇಲ್ಲ. ಹಾಗಾಗಿ, ಸರ್ಕಾರದಲ್ಲಿ ಯಾವುದೇ ಸ್ಥಾನಮಾನ ಹೊಂದುವ ಅವಕಾಶ ಸದ್ಯದ ಮಟ್ಟಿಗೆ ಪ್ರತಾಪ್ ಗೌಡ ಪಾಟೀಲ್ಗೆ ಇಲ್ಲದಂತಾಗಿದೆ.
ಇನ್ನು ಎರಡು ವರ್ಷಕ್ಕೆ ಮತ್ತೆ ಚುನಾವಣೆ ಬರಲಿದೆ. ಆಗ ಗೆದ್ದರೆ ಬಿಜೆಪಿ ಸರ್ಕಾರ ಬಂದರೆ ಪರಿಗಣಿಸಬಹುದು ಎನ್ನುವ ಆಶ್ವಾಸನೆಯೊಂದನ್ನು ಮಾತ್ರ ಬಿಜೆಪಿ ನಾಯಕರು ಪ್ರತಾಪ್ ಗೌಡ ಪಾಟೀಲ್ಗೆ ನೀಡಬಹುದಾಗಿದೆ. ಸಂಘಟನೆಯಲ್ಲಿ ಯಾವುದಾದರೂ ಜವಾಬ್ದಾರಿ ನೀಡಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಸೂಚನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜಕೀಯ ಭವಿಷ್ಯಕ್ಕೆ ಮಂಕು:
ಶಾಸಕ ಸ್ಥಾನ ಬಿಟ್ಟು ಬಂದಿರುವ ಪ್ರತಾಪ್ ಗೌಡ ಪಾಟೀಲ್ಗೆ, ಇತ್ತ ಶಾಸಕ ಸ್ಥಾನವೂ ಇಲ್ಲ, ಅತ್ತ ಸಚಿವ ಸ್ಥಾನವೂ ಇಲ್ಲ. ಇದರಿಂದ, ಪಾಟೀಲ್ ಅವರ ಬಿಜೆಪಿ ಸೇರಿ ಮಂತ್ರಿಯಾಗುವ ಕನಸು ನುಚ್ಚು ನೂರಾಗಿದೆ. ತನ್ನೊಂದಿಗೆ ಬಿಜೆಪಿ ಬಂದವರಿಗೆ ಸಿಕ್ಕ ಅವಕಾಶ ತನಗೆ ಸಿಗದೆ ಪಾಟೀಲ್ ರಾಜಕೀಯ ಭವಿಷ್ಯ ಅತಂತ್ರವಾಗಿದೆ. ಹಾಗಾಗಿ, ಪಾಟೀಲ್ ಮುಂದಿನ ರಾಜಕೀಯ ಭವಿಷ್ಯವೇನು ಎನ್ನುವ ಪ್ರಶ್ನೆ ಉದ್ಭವಿಸಿದೆ.
ನಾಯಕರು ತೀರ್ಮಾನಿಸುತ್ತಾರೆಂದ ವಿಜಯೇಂದ್ರ :
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಸ್ಕಿ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ, ಈಗಷ್ಟೆ ಫಲಿತಾಂಶ ಬಂದಿದೆ. ಪ್ರತಾಪ್ ಗೌಡ ಪಾಟೀಲ್ಗೆ ಯಾವ ಜವಾಬ್ದಾರಿ ನೀಡಬೇಕು, ಅವರ ಮುಂದಿನ ರಾಜಕೀಯ ಭವಿಷ್ಯ ಏನು ಎನ್ನುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ನಾಯಕರು ತೀರ್ಮಾನಿಸಲಿದ್ದಾರೆ ಎಂದಿದ್ದಾರೆ.
ಈಟಿವಿ ಭಾರತ ಅವಲೋಕನ
ಉಪಚುನಾವಣೆ ಸೋಲಿನ ಮೂಲಕ ಸಚಿವ ಸ್ಥಾನದ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ವಿಫಲವಾದ ಪ್ರತಾಪ್ ಗೌಡ ಪಾಟೀಲ್ಗೆ ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ಸದ್ಯಕ್ಕೆ ಕಷ್ಟ ಸಾಧ್ಯ. ಆದರೆ ಪಕ್ಷದಲ್ಲಿ ಸಂಘಟನಾತ್ಮಕ ಜವಾಬ್ದಾರಿ ಸಿಗುವ ಸಾಧ್ಯತೆ ದಟ್ಟವಾಗಿದೆ.