ಬೆಂಗಳೂರು: ರಾಜ್ಯ ಚನಾವಣಾ ಅಖಾಡದಲ್ಲಿ ಭರ್ಜರಿ ಪ್ರಚಾರ ಕಾರ್ಯ ಆರಂಭವಾಗಿದೆ. ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಇತ್ತ ಪಕ್ಷದ ಸ್ಟಾರ್ ಪ್ರಚಾರಕರ ಮೂಲಕ ಮತಯಾಚನೆಗೆ ಪಕ್ಷಗಳು ಸಜ್ಜಾಗಿವೆ. ಅಷ್ಟಕ್ಕೂ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರ ಪ್ರಾಮುಖ್ಯತೆ ಏನು?, ಚುನಾವಣಾ ಆಯೋಗದಿಂದ ತಾರಾ ಪ್ರಚಾರಕರಿಗೆ ಇರುವ ಸೌಲಭ್ಯಗಳೇನು? ಎಂಬ ವರದಿ ಇಲ್ಲಿದೆ.
ರಾಜಕೀಯ ಪಕ್ಷಗಳು ಚುನಾವಣಾ ಅಖಾಡದಲ್ಲಿ ಮತದಾರರ ಮತ ಸೆಳೆಯಲು ಬಳಸುವ ಅಸ್ತ್ರವೇ ತಾರಾ ಪ್ರಚಾರಕರು. ತಮ್ಮ ಪಕ್ಷಗಳ ಜನಪ್ರಿಯ ನಾಯಕರನ್ನು ಅಧಿಕೃತ ಸ್ಟಾರ್ ಪ್ರಚಾರಕರಾಗಿ ನೇಮಿಸಲಾಗುತ್ತದೆ. ಈ ತಾರಾ ಪ್ರಚಾರಕರಿಂದ ಚುನಾವಣಾ ಪ್ರಚಾರ ನಡೆಸಿ ಮತಯಾಚನೆ ಮಾಡಲಾಗುತ್ತದೆ. ಸದ್ಯಕ್ಕೆ ರಾಜ್ಯ ಚುನಾವಣೆಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಮತ್ತು ಜೆಡಿಎಸ್ ತಮ್ಮ ಬತ್ತಳಿಕೆಯಲ್ಲಿರುವ ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿವೆ.
ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 40, ಜೆಡಿಎಸ್ 26 ಸ್ಟಾರ್ ಪ್ರಚಾರಕರನ್ನು ನೇಮಿಸಿದೆ. ಈಗಾಗಲೇ ಈ ಸ್ಟಾರ್ ಪ್ರಚಾರಕರು ರಾಜ್ಯಾದ್ಯಂತ ಪ್ರವಾಸ ನಡೆಸಿ, ತಮ್ಮ ಪಕ್ಷಗಳ ಪರ ಮತಯಾಚನೆ ನಡೆಸಲು ಆರಂಭಿಸಿದ್ದಾರೆ. ಈ ಪ್ರಚಾರಕರ ಮೂಲಕ ಚುನಾವಣಾ ರಣಕಣ ಇನ್ನಷ್ಟು ರಂಗೇರುತ್ತಿದೆ.
ಯಾರಿದು ತಾರಾ ಪ್ರಚಾರಕರು?: ಚುನಾವಣಾ ಆಯೋಗದ ಅನುಮತಿಯೊಂದಿಗೆ ತಾರಾ ಪ್ರಚಾರಕರ ಪಟ್ಟಿಯನ್ನು ರಾಜಕೀಯ ಪಕ್ಷಗಳು ಪ್ರಕಟಿಸುತ್ತವೆ. ಚುನಾವಣೆಯಲ್ಲಿ ಹೆಚ್ಚು ಮತ ಸೆಳೆಯುವ ಸಾಮರ್ಥ್ಯ ಇರುವ ವ್ಯಕ್ತಿಗಳನ್ನು ಪಕ್ಷ ನೇಮಿಸಿ, ಅದಕ್ಕೆ ಚುನಾವಣಾ ಆಯೋಗ ಅನುಮೋದನೆ ನೀಡುತ್ತದೆ. ಅಧಿಕೃತ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಗರಿಷ್ಠ 40 ತಾರಾ ಪ್ರಚಾರಕರನ್ನು ನಿಯೋಜಿಸಬಹುದು. ನೋಂದಾಯಿತ ಗುರುತಿಸದ ರಾಜಕೀಯ ಪಕ್ಷಗಳು ಗರಿಷ್ಠ 20 ತಾರಾ ಪ್ರಚಾರಕರನ್ನು ನಿಯೋಜಿಸಬಹುದು. ಚುನಾವಣಾ ಆಯೋಗವು ನೀತಿ ಸಂಹಿತೆಯಡಿ ತಾರಾ ಪ್ರಚಾರಕರಿಗೆ ಪ್ರಚಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಪ್ರಚಾರಕರು ಪ್ರಚಾರ ನಡೆಸಬೇಕು ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಕ್ಷಕ್ಕೆ ಮತ ಸೆಳೆಯುವ ಜನಪ್ರಿಯ ವ್ಯಕ್ತಿ ತಾರಾ ಪ್ರಚಾರಕರಾಗಿರುತ್ತಾರೆ. ಆ ವ್ಯಕ್ತಿ ರಾಜಕಾರಣಿಯಾಗಿರಬಹುದು ಅಥವಾ ಸಿನಿಮಾ ತಾರೆಯರು ಇರಬಹುದು. ಇಂಥವರೇ ತಾರಾ ಪ್ರಚಾರಕರು ಆಗಬಹುದು ಎಂಬುದಕ್ಕೆ ಯಾವುದೇ ನಿರ್ದಿಷ್ಟ ಕಾನೂನು ಇಲ್ಲ. ಯಾರನ್ನು ತಾರಾ ಪ್ರಚಾರಕರನ್ನಾಗಿ ಮಾಡಬೇಕು ಎಂಬ ಬಗ್ಗೆ ನಿರ್ಧರಿಸುವ ಅಧಿಕಾರ ರಾಜಕೀಯ ಪಕ್ಷಗಳಿಗೆ ಮಾತ್ರ ಇದೆ. ಆ ತಾರಾ ಪ್ರಚಾರಕರಿಗೆ ಚುನಾವಣೆ ಆಯೋಗ ಅನುಮೋದನೆ ನೀಡುತ್ತದೆ. ಸ್ಟಾರ್ ಪ್ರಚಾರಕರು ಯಾವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಬೇಕು, ಎಲ್ಲಿವರೆಗೆ ಪ್ರಚಾರ ನಡೆಸಬೇಕು ಎಂಬುದನ್ನು ಆಯಾ ರಾಜಕೀಯ ಪಕ್ಷಗಳೇ ನಿರ್ಧರಿಸುತ್ತವೆ.
ಇದನ್ನೂ ಓದಿ : ಬೆಂಗಳೂರಲ್ಲಿ ಮಹಿಳಾ ಅಭ್ಯರ್ಥಿಗಳು ಗೆದ್ದಿರುವುದೆಷ್ಟು? ಪುರುಷರಿಗೆ ಸ್ಪರ್ಧೆಯೊಡ್ಡುವರೇ ವುಮನ್ ಕ್ಯಾಂಡಿಡೇಟ್ಸ್!
ತಾರಾ ಪ್ರಚಾರಕರ ಚುನಾವಣಾ ವೆಚ್ಚ: ಚುನಾವಣಾ ತಾರಾ ಪ್ರಚಾರಕರ ವೆಚ್ಚವನ್ನು ಪಕ್ಷಗಳು ಭರಿಸುತ್ತವೆ. ಅಭ್ಯರ್ಥಿಗಳು ಪ್ರಚಾರಕರ ವೆಚ್ಚ ಭರಿಸುವುದಿಲ್ಲ. ಹಾಗಾಗಿ, ತಾರಾ ಪ್ರಚಾರಕರ ವೆಚ್ಚವನ್ನು ಅಭ್ಯರ್ಥಿಗಳ ವೆಚ್ಚಕ್ಕೆ ಸೇರಿಸಲಾಗುವುದಿಲ್ಲ. ಇದರಿಂದ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ. ಪ್ರತಿ ಅಭ್ಯರ್ಥಿಗೆ ಒಂದು ಕ್ಷೇತ್ರದಲ್ಲಿ ಗರಿಷ್ಠ 40 ಲಕ್ಷ ರೂ. ಪ್ರಚಾರ ವೆಚ್ಚ ಮಾಡಲು ಅನುಮತಿ ಇದೆ. ಚುನಾವಣಾ ಆಯೋಗ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಹದ್ದಿನ ಕಣ್ಣು ಇಟ್ಟಿರುತ್ತದೆ. ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ, ತಾರಾ ಪ್ರಚಾರಕರ ವೆಚ್ಚಗಳನ್ನು ಆಯಾ ರಾಜಕೀಯ ಪಕ್ಷಗಳೇ ಭರಿಸಬೇಕು ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಷರತ್ತು, ನಿಬಂಧನೆಗಳು ಅನ್ವಯಿಸುತ್ತವೆ: ತಾರಾ ಪ್ರಚಾರಕರು ರಾಜ್ಯಾದ್ಯಂತ ತಮ್ಮ ಪಕ್ಷ, ಅಭ್ಯರ್ಥಿ ಪರ ಮುಕ್ತವಾಗಿ ಸಂಚರಿಸಬಹುದು. ಚುನಾವಣಾ ಆಯೋಗ ಅವರಿಗೆ ಯಾವುದೇ ಅಡ್ಡಿ ಪಡಿಸಲ್ಲ. ಅಭ್ಯರ್ಥಿಗಳಿಗೆ ತಾರಾ ಪ್ರಚಾರಕರ ವೆಚ್ಚದ ಹೊರೆ ಬೀಳದಿರಬೇಕಾದರೆ ತಾರಾ ಪ್ರಚಾರಕ ಪಕ್ಷದ ಪರ ಸಾರ್ವತ್ರಿಕ ಪ್ರಚಾರ ನಡೆಸಬೇಕು. ಅಭ್ಯರ್ಥಿಯ ಹೆಸರು ಉಲ್ಲೇಖಿಸಬಾರದು ಎಂದು ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ನಾಮಪತ್ರಕ್ಕೆ ಸಹಿ ಹಾಕುವುದನ್ನೇ ಮರೆತ ಅಭ್ಯರ್ಥಿ: ಅರ್ಜಿ ತಿರಸ್ಕೃತ
ಒಂದು ವೇಳೆ ತಾರಾ ಪ್ರಚಾರಕ ಅಭ್ಯರ್ಥಿ ಜೊತೆ ವೇದಿಕೆ ಹಂಚಿಕೊಂಡರೆ, ಅವರ ಪ್ರಯಾಣ ವೆಚ್ಚ ಹೊರತು ಪಡಿಸಿ ಸಂಪೂರ್ಣ ಪ್ರಚಾರ ವೆಚ್ಚ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರ್ಪಡೆಯಾಗುತ್ತದೆ. ಒಂದು ವೇಳೆ ಪ್ರಚಾರದ ವೇಳೆ ತಾರಾ ಪ್ರಚಾರಕ ಅಭ್ಯರ್ಥಿಯ ಹೆಸರನ್ನು ಉಲ್ಲೇಖಿಸಿದರೂ ಈ ನಿಯಮ ಅನ್ವಯವಾಗುತ್ತದೆ. ತಾರಾ ಪ್ರಚಾರಕ ನಡೆಸುವ ಚುನಾವಣೆ ರ‍್ಯಾಲಿಯಲ್ಲಿ ಒಂದು ವೇಳೆ ಅಭ್ಯರ್ಥಿ ಇರದಿದ್ದು, ಆದರೆ ರಾಲಿ ನಡೆಸುವ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪೋಸ್ಟರ್ ಹಾಕಿದ್ದರೆ ಸಂಪೂರ್ಣ ವೆಚ್ಚ ಸ್ಪರ್ಧಿಯ ಚುನಾವಣಾ ವೆಚ್ಚದಲ್ಲಿ ಸೇರುತ್ತದೆ.
ನೀತಿ ಸಂಹಿತೆ ಮಾರ್ಗಸೂಚಿಯನ್ವಯ ಒಂದು ವೇಳೆ ಪ್ರಧಾನಿ, ಮಾಜಿ ಪ್ರಧಾನಿ ತಾರಾ ಪ್ರಚಾರಕರಾಗಿ ಪಾಲ್ಗೊಂಡರೆ ಭದ್ರತಾ ವೆಚ್ಚಗಳನ್ನು ಸರ್ಕಾರವೇ ಭರಿಸುತ್ತದೆ. ಆ ವೆಚ್ಚವನ್ನು ಪಕ್ಷದ ವೆಚ್ಚಕ್ಕೆ ಅಥವಾ ಅಭ್ಯರ್ಥಿಗಳ ವೆಚ್ಚಕ್ಕೆ ಸೇರಿಸಲಾಗುವುದಿಲ್ಲ. ಒಂದು ವೇಳೆ ಇನ್ನೋರ್ವ ತಾರಾ ಪ್ರಚಾರಕ ಪ್ರಧಾನಿ ಜೊತೆ ಸಂಚರಿಸಿದರೆ ನಿರ್ದಿಷ್ಟ ಅಭ್ಯರ್ಥಿಯು ಭದ್ರತಾ ವ್ಯವಸ್ಥೆಯ ಶೇ.50ರಷ್ಟು ವೆಚ್ಚವನ್ನು ಭರಿಸಬೇಕು.