ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವರಲಕ್ಷ್ಮಿ ಸ್ಟೋರ್ಸ್ ಧಾರಾವಾಹಿಯಲ್ಲಿ ಕನ್ವರ್ ಲಾಲ್ ನಂಜುಂಡಿಯ ಹೆಂಡತಿ ಕುಳ್ ಮೂಟೆ ರಕ್ಷಿತಾ ಆಗಿ ನಡೆಸುತ್ತಿರುವ ಈ ಕುವರಿ ಯಾರು ಅಂತೀರಾ?. ಇಲ್ಲದೆ ಈ ಬಗ್ಗೆ ಪುಟ್ಟ ಮಾಹಿತಿ.
ಈಕೆಯ ಹೆಸರು ರಿಶಾ ನಿಜಗುಣ. ಚಿತ್ರದುರ್ಗದ ಈ ಚೆಲುವೆ ಬಿಕಾಂ ಪದವೀಧರಳೂ ಹೌದು. ಬಾಲ್ಯದಿಂದಲೂ ನೃತ್ಯದತ್ತ ವಿಶೇಷ ಆಸಕ್ತಿ ಇರಿಸಿಕೊಂಡಿದ್ದ ರಿಶಾಗೆ ಅದರಲ್ಲೇ ಮುಂದುವರಿಯುವ ಬಯಕೆ. ಆದರೆ, ಹೆತ್ತವರಿಗೆ ಮಗಳು ಬಣ್ಣದ ಜಗತ್ತಿಗೆ ಕಾಲಿಟ್ಟರೆ ಚೆನ್ನ ಎಂಬ ಕನಸು. ಹೆತ್ತವರ ಕನಸು ನನಸು ಮಾಡುವುದೇ ತನ್ನ ಗುರಿ ಎಂದ ಮುದ್ದು ಮುಖದ ಚೆಲುವೆ ರಿಶಾ ಮಹಾನಗರಿಗೆ ಬಂದಿದ್ದೆ ತಡ, ನಟನೆಯ ರೀತಿ ನೀತಿಗಳನ್ನು ಬಹು ಆಳವಾಗಿ ತಿಳಿಯಲು ಕಲಾತ್ಮಕ ತಂಡ ಸೇರಿದ್ದೂ ಆಯಿತು.
ನಟನೆಯ ಆಗು ಹೋಗುಗಳ ಪರಿಚಯವಾದ ಬಳಿಕವಷ್ಟೇ ಆಕೆ ಈ ಲೋಕಕ್ಕೆ ಕಾಲಿಟ್ಟಿದ್ದು. ಆಡಿಷನ್ಗಳಿಗೆಲ್ಲಾ ತಪ್ಪದೇ ಹಾಜರಾಗುತ್ತಿದ್ದ ಈಕೆ ಮೊದಲ ಬಾರಿ ನಾಯಕಿಯಾಗಿ ಬೆಳ್ಳಿತೆರೆಗೆ ಕಾಲಿಟ್ಟಾಗ ಆಕೆಗೆ ಸ್ವರ್ಗಕ್ಕೆ ಮೂರೇ ಗೇಣು. ಪ್ರೇಮ್ ನಿರ್ದೇಶನದ ಡಿಕೆ ಬೋಸ್ನಲ್ಲಿ ನಾಯಕಿಯಾಗಿ ನಟಿಸಿದ ರಿಶಾ ನಿಜಗುಣ ನಂತರ ಮುಖ ಮಾಡಿದ್ದು ಕಿರುತೆರೆಯತ್ತ. ಅದಕ್ಕಾಗಿ ಅವರು ಅಟೆಂಡ್ ಮಾಡಿದ ಆಡಿಷನ್ಗಳಿಗೆ ಲೆಕ್ಕವಿಲ್ಲ. ಅದೃಷ್ಟದ ಬಾಗಿಲು ತೆರೆಯಿತು ಎಂಬಂತೆ ವರಲಕ್ಷ್ಮಿ ಸ್ಟೋರ್ಸ್ ಧಾರಾವಾಹಿಗೆ ರಿಶಾ ಆಯ್ಕೆ ಆಗಿಯೇ ಬಿಟ್ಟರು.
ಸದ್ಯ ವರಲಕ್ಷ್ಮಿ ಸ್ಟೋರ್ಸ್ನ ರಕ್ಷಿತಾ ಆಗಿ ಕಿರುತೆರೆಯಾದ್ಯಂತ ಮನೆ ಮಾತಾಗಿರುವ ರಿಶಾಗೆ ತಂದೆ, ತಾಯಿಯೇ ರೋಲ್ ಮಾಡೆಲ್. ತಾನು ನಟಿಯಾಗಬೇಕು ಎಂಬುದು ಕುಟುಂಬದವರ ಕನಸಾಗಿತ್ತು. ಮಾತ್ರವಲ್ಲ ತನ್ನನ್ನು ಪರದೆಯ ಮೇಲೆ ನೋಡಿ ಕಣ್ತುಂಬಿಕೊಳ್ಳಬೇಕು ಎಂಬುದು ತಮ್ಮನ ಆಸೆಯೂ ಇತ್ತು. ಇದೆರಡನ್ನು ನನಸು ಮಾಡಿದ ಸಂತಸ ನನಗಿದೆ ಎಂದು ನಗುನಗುತ್ತಾ ಹೇಳುವ ಚಿತ್ರದುರ್ಗದ ಚೆಲುವೆಗೆ ಹಿರಿಯ ನಟ ಅನಂತನಾಗ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಇರಾದೆಯಿದೆ.