ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಮೂರು ವರ್ಷ ಮತ್ತು ಬೊಮ್ಮಾಯಿ ಸಿಎಂ ಆಗಿ ಒಂದು ವರ್ಷ ಪೂರೈಸಿದ ಹಿನ್ನೆಲೆ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದ್ರೆ ಅದು ಸರ್ಕಾರದ ಭ್ರಷ್ಟೋತ್ಸವ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದಿದ್ದರು. ಆದ್ರೆ ಹಾಲು, ತರಕಾರಿ, ಹಣ್ಣು, ಬೇಳೆ ಕಾಳು ಬೆಳೆಗಳಿಗೆ ಬೆಲೆ ಡಬಲ್ ಆಗಿಲ್ಲ. ಗೊಬ್ಬರ, ಬಿತ್ತನೆ ಬೀಜದ ಬೆಲೆ ಹೆಚ್ಚಿಸಲಾಗಿದೆ. ರೈತರಿಗೆ ಈ ಸರ್ಕಾರದಿಂದ ಯಾವ ಅನುಕೂಲ ಆಗಿಲ್ಲ. ಕೋವಿಡ್ ಸಂದರ್ಭದಲ್ಲಿ ಸರ್ಕಾರದಿಂದ ಯಾರಿಗೆ ಅನುಕೂಲ ಆಗಿದೆ ಎಂಬುದನ್ನು ತಿಳಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರವನ್ನು ಆಗ್ರಹಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜತೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಯುವಕರಿಗೆ 2 ಕೋಟಿ ಉದ್ಯೋಗವನ್ನು ವಾರ್ಷಿಕವಾಗಿ ನೀಡುತ್ತೇನೆ ಎಂದಿದ್ರು. ಖಾಸಗಿ, ಸರ್ಕಾರದಲ್ಲಿ ಯಾವ ಕಡೆ ನೇಮಕಾತಿ ಆಗಿದೆ ತಿಳಿಸಿ. ಸಾಕಷ್ಟು ಕಡೆ ಭ್ರಷ್ಟಾಚಾರ ಆಗಿದೆ. ಒಂದೇ ದಿನ ಐಪಿಎಸ್, ಐಎಎಸ್ ಅಧಿಕಾರಿ ಬಂಧಿತರಾಗಿದ್ದಾರೆ. ಬಂಧಿತರ ಮಂಪರು ಪರೀಕ್ಷೆ ಆಗಿಲ್ಲ. ಗುತ್ತಿಗೆದಾರ ಸಂಘದ ಅಧ್ಯಕ್ಷ ಲೆಂಪಣ್ಣ ಅವರನ್ನು ಕರೆಸಿ ಮಾಹಿತಿ ಯಾಕೆ ಪಡೆದಿಲ್ಲ. ಬೆಳಗಾವಿ ಜಿಲ್ಲೆಯ ನಿಮ್ಮ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ತನಿಖೆ ಯಾಕೆ ಆಗಿಲ್ಲ. ಕೇವಲ ಕ್ಲೀನ್ ಚಿಟ್ ಕೊಡಿಸುವುದರಲ್ಲಿ ಮಾತ್ರ ಸಾಧನೆ ಮಾಡಿದ್ದೀರಿ ಎಂದು ವ್ಯಂಗ್ಯವಾಡಿದ್ರು.
ಬಿಜೆಪಿಯ ಪ್ರಶ್ನೋತ್ಸವ: ರಾಜ್ಯ ಸರ್ಕಾರ ಒಂದು ವರ್ಷದ ಸಾಧನಾ ಸಮಾವೇಶ ಮಾಡ್ತೇವೆ ಎಂದು ಹೇಳಿದೆ. ಒಂದು ವರ್ಷ ಅಂತ ಯಾಕೆ ಹೇಳುತ್ತಿದ್ದೀರಿ. ಹೆಚ್ಚು ಕಮ್ಮಿ ಬಿಜೆಪಿ ಸರ್ಕಾರ ಬಂದು ನಾಲ್ಕು ವರ್ಷಗಳಾಗಿವೆ. ಬಿಜೆಪಿಯ ಪ್ರಶ್ನೋತ್ಸವ ಎಂದು ಮಾಡಬೇಕು. ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಬೆಂಗಳೂರು ಮತ್ತು ರಾಜ್ಯ ಭ್ರಷ್ಟಾಚಾರದ ಕ್ಯಾಪಿಟಲ್ ಆಗಿದೆ. ನಿಜವಾಗಿಯೂ ಸಾಧನೆ ಮಾಡಿದ್ರೆ, ನಿಮ್ಮ ಪ್ರಧಾನಿಗಳು, ವರಿಷ್ಠರು ಬಂದು ಹಾಡಿ ಹೊಗಳಿ ಹೋಗುತ್ತಿದ್ದರು ಎಂದರು.
ಡಿಕೆಶಿ ವಾಗ್ದಾಳಿ: ಹಾಲು, ಮೊಸರು, ಪನ್ನೀರಿನ ಮೇಲೆ ಜೆಎಸ್ಟಿ ಹಾಕಿ ದಾಖಲೆ ಸೃಷ್ಟಿ ಮಾಡಿದ್ದೀರಿ. ರೈತರಿಗೆ ಯಾವುದೇ ಅನುಕೂಲ ಆಗಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 21 ಲಕ್ಷ ಕೋಟಿ ಘೋಷಣೆ ಮಾಡಿದ್ರು. ಯಾರಿಗೆ ಸಹಾಯ ಮಾಡಿದ್ರು ಎಂಬುದರ ಪಟ್ಟಿ ಬಿಡುಗಡೆ ಮಾಡಿ. ಪೊಲೀಸ್ ಇರಲಿ, ಶಿಕ್ಷಣ ಇಲಾಖೆ ಇರಲಿ, ಯಾವುದೇ ಇಲಾಖೆಯಲ್ಲಿ ಅರ್ಜಿ ಹಾಕಿದ್ರೆ, ಭ್ರಷ್ಟಾಚಾರ ತಾಂಡವ ಆಡುತ್ತದೆ. ಆದರೆ ನಮ್ಮ ನಾಯಕರು ಹೇಳಿದ ಮೇಲೆ ವಿಧಿ ಇಲ್ಲದೆ ಬಂಧನ ಮಾಡಿದ್ರಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ ಸರ್ಕಾರದ ಸಾಧನಾ ಸಮಾವೇಶ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಅವಧಿಯಲ್ಲಿ ಹಿಂದೆಂದೂ ನಡೆಯದ ಭ್ರಷ್ಟಾಚಾರ ನಡೆದಿದೆ. 40% ಕಮಿಷನ್ ದಂಧೆ ಗುತ್ತಿಗೆದಾರ ಸಂತೋಷ ಬಲಿ ಪಡೆದಿದೆ. ಸಂಬಂಧಿಸಿದ ಸಚಿವರು ರಾಜೀನಾಮೆ ನೀಡಿದ್ದರು. ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ. ಸರ್ಕಾರ ಇವರನ್ನು ಕಾಪಾಡಿದೆ. ನಾವು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೆವು. ಈಗಲೂ ಅದಕ್ಕೆ ಒತ್ತಡ ಹೇರುತ್ತೇವೆ. ಭ್ರಷ್ಟಾಚಾರ ಸರ್ಕಾರದ ಜನೋತ್ಸವ ಸಮಾವೇಶಕ್ಕೆ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ: ಪ್ರತಿಪಕ್ಷ ನಾಐಕ ಸಿದ್ದರಾಮಯ್ಯ ಮಾತನಾಡಿ, ಡಬಲ್ ಎಂಜಿನ್ ಸರ್ಕಾರ, ಕೇಂದ್ರ ಸಾಕಷ್ಟು ಕೊಡುಗೆ ನೀಡಿದೆ ಎನ್ನುತ್ತಾರೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಮಾಡಿದ ಅನ್ಯಾಯ ಈ ಹಿಂದೆ ಎಂದೂ ಮಾಡಿರಲಿಲ್ಲ. ಜಿಎಸ್ಟಿ ನೀಡಿಕೆಯಲ್ಲಿ ಅನ್ಯಾಯವಾಗಿದೆ. 15 ನೇ ಹಣಕಾಸು ಆಯೋಗದಲ್ಲಿ ನಮಗೆ ಅನ್ಯಾಯವಾಗಿದೆ. ಹಣ ಕಡಿಮೆ ಬಂದಿದೆ. ರಾಜ್ಯಕ್ಕೆ ಹಣಕಾಸು ವಿಚಾರದಲ್ಲಿ ದೊಡ್ಡ ಹೊಡೆತ ಬಿದ್ದಿದೆ. ಜಿಎಸ್ಟಿ ಪರಿಹಾರ ನಿಂತು ಹೋಗಿದೆ. ಬಡವರ ರಕ್ತ ಕುಡಿಯುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ. ಮೂರು ವರ್ಷದಲ್ಲಿ ಒಂದು ಹೊಸ ಮನೆ ಕಟ್ಟಿಸಿಕೊಡಲು ಈ ಸರ್ಕಾರದಿಂದ ಆಗಿಲ್ಲ. ನಾವು 1 ಲಕ್ಷ ಮನೆ ನಿರ್ಮಾಣಕ್ಕೆ ಘೋಷಣೆ ಮಾಡಿ, ಜಾಗ ಕೂಡ ಮೀಸಲಿಟ್ಟಿದ್ದೆವು ಎಂದರು.
ಬೊಮ್ಮಾಯಿ ಸರ್ಕಾರಕ್ಕೆ ಶೂನ್ಯ ಅಂಕ: ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸರ್ಕಾರವೇ ಮನುವಾದಿಗಳಿಗೆ ಬೆಂಬಲ ನೀಡುವ ಕಾರ್ಯ ಮಾಡಿದೆ. ಅವರು ಕಾನೂನು ಕೈಗೆತ್ತಿಕೊಂಡು, ಅರಾಜಕತೆ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರೆ. ಹಿಜಾಬ್, ಹಲಾಲ್, ಆಜಾನ್, ಜಾತ್ರೆಯಲ್ಲಿ ನಿಷೇಧ ಹೇರಿ ದ್ವೇಷ ಬಿತ್ತಿ, ಸಾಮರಸ್ಯ ನಾಶ ಮಾಡುವ ಕಾರ್ಯ ಆಗುತ್ತಿದೆ. ಯಡಿಯೂರಪ್ಪ ಸ್ವಲ್ಪ ಆರ್ಎಸ್ಎಸ್ ನಿಂದ ಹೊರಗಿದ್ದು ಕೆಲಸ ಮಾಡಿದ್ದರು. ಆದರೆ ಬೊಮ್ಮಾಯಿ ಆರ್ ಎಸ್ ಎಸ್ ಕಪಿಮುಷ್ಠಿಯಲ್ಲಿದ್ದಾರೆ. ಸರ್ಕಾರ ಜನರಿಗೆ ದೊಡ್ಡ ದ್ರೋಹ, ಅನ್ಯಾಯ ಮಾಡಿದೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಅಭಿವೃದ್ಧಿ ಶೂನ್ಯ. ಬೊಮ್ಮಾಯಿ ಸರ್ಕಾರಕ್ಕೆ ಶೂನ್ಯ ಅಂಕ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.