ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಇವತ್ತು ಹಲವು ಮಹತ್ವದ ತೀರ್ಮಾನಗಳನ್ನ ತೆಗೆದುಕೊಂಡಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, ವಿಧಾನಸಭಾ ಮಾಜಿ ಸಭಾಧ್ಯಕ್ಷ ಕೆ ಜಿ ಬೋಪಯ್ಯ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೆ ತೀರ್ಮಾನಿಸಲಾಗಿದೆ. ಶಾಸಕರಾದ ಅರಗ ಜ್ಞಾನೇಂದ್ರ, ಎ ಟಿ ರಾಮಸ್ವಾಮಿ, ರಾಜಶೇಖರ್ ಬಸವರಾಜ್ ಪಾಟೀಲ್, ರಾಜೀವ್ ಗೌಡ ಸಮಿತಿಯ ಸದಸ್ಯರಿರಲಿದ್ದಾರೆ ಎಂದು ತಿಳಿಸಿದರು.
ಆಶಾ ಕಾರ್ಯಕರ್ತರಿಗೆ ಹಂತ ಹಂತವಾಗಿ ಹಣ ಪಾವತಿಸುವ ಬದಲು ಒಂದೇ ಬಾರಿಗೆ 3,000 ರೂ. ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಒಟ್ಟು 41,628 ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ನೀಡಲು ನಿರ್ಧಾರಿಸಲಾಗಿದೆ. 12.48 ಕೋಟಿ ರೂ. ಅನುದಾನ ನೀಡಲು ತೀರ್ಮಾನಿಸಲಾಗಿದೆ.
ಸಚಿವ ಸಂಪುಟದ ಪ್ರಮುಖ ತೀರ್ಮಾನಗಳು:
-ಅಕ್ರಮ ಗಣಿಗಾರಿಕೆ ಸಂಬಂಧ ತನಿಖೆಗಾಗಿ ಲೋಕಾಯುಕ್ತ ಸಂಸ್ಥೆಯ ಎಸ್ಐಟಿ ಕಾರ್ಯಾವಧಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.ಇವಿಎಂ, ವಿವಿಪ್ಯಾಟ್‌ಗಳ ಸಂಪೂರ್ಣ ರಕ್ಷಣೆ ಹಾಗೂ ಭದ್ರತೆಗಾಗಿ ರಾಜ್ಯದ ಎಲ್ಲ 33 ಜಿಲ್ಲಾ ಚುನಾವಣಾ ಕೇಂದ್ರಗಳಲ್ಲಿ ಉಗ್ರಾಣ ನಿರ್ಮಿಸಲು 123 ಕೋಟಿ ರೂ. ಮೀಸಲಿಡಲಾಗುವುದು.
-ಬೆಂಗಳೂರು ಕೇಂದ್ರ ಕರಾಗೃಹದಲ್ಲಿ ಹೈ ಸೆಕ್ಯೂರಿಟಿ ವಾರ್ಡ್ ನಿರ್ಮಾಣಕ್ಕೆ 100 ಕೋಟಿ ರೂ. ಹಾಗೂ ವಿಜಯಪುರ ಕಾರಾಗೃಹದಲ್ಲಿ ಹೊಸ ಬ್ಲಾಕ್ ಮಾಡಲು 99.98 ಕೋಟಿ ರೂ. ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. ಉಗ್ರಗಾಮಿಗಳನ್ನು ಬಂಧಿಸಿಡುವ ಉದ್ದೇಶದಿಂದ ಅವರಿಗಾಗಿ ಪ್ರತ್ಯೇಕ ಬ್ಲಾಕ್‌ಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.
-ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಕಾಯ್ದೆ ತಿದ್ದುಪಡಿ. ಈ ಮುಂಚೆ ಬೆಂಗಳೂರು ಹೊರತುಪಡಿಸಿ ಇತರ ನಗರ ಪಾಲಿಕೆಗಳಿಗೆ ಇದು ಅನ್ವಯವಾಗುತ್ತಿತ್ತು. ಇನ್ಮುಂದೆ ಬಿಬಿಎಂಪಿಗೆ ಅನ್ವಯವಾಗುವಂತೆ ಅನಧಿಕೃತ ಕಟ್ಟಡ ನಿರ್ಮಿಸಿದವರಿಂದ ತೆರಿಗೆಯ ಎರಡು ಪಟ್ಟು ಕಂದಾಯ ವಸೂಲಿ ಮಾಡಲು ತಿದ್ದುಪಡಿ. ತೆರವು ಮಾಡುವ ತನಕ ಎರಡು ಪಟ್ಟು ತೆರಿಗೆ ವಸೂಲಿ ಮಾಡಲು ತಿದ್ದುಪಡಿ.
- ಹಾವೇರಿಯಲ್ಲಿ ಹೊಸ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ. ಅದಕ್ಕಾಗಿ 478.75 ಕೋಟಿ ರೂಪಾಯಿ.
-ಯಾದಗಿರಿಯಲ್ಲೂ ಹೊಸ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಅನುಮೋದನೆ. ಅದಕ್ಕಾಗಿ 478.75 ಕೋಟಿ ರೂ. ಅನುಮೋದನೆ.
-ಕಾರವಾರದಲ್ಲಿನ 450 ಹಾಸಿಗೆಯ ಜಿಲ್ಲಾಸ್ಪತ್ರೆಯನ್ನು 700 ಹಾಸಿಗೆ ಆಸ್ಪತ್ರೆ ಮಾಡಲು ತೀರ್ಮಾನ. 144.51 ಕೋಟಿ ರೂ.ಗೆ ಅನುಮೋದನೆ.
- ಬೆಂಗಳೂರಿನ ಇಂದಿರಾಗಾಂಧಿ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಹೊಸ 450 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷ್ಯಾಲಿಟಿ ಆಸ್ಪತ್ರೆ ನಿರ್ಮಿಸಲು 132.31 ಕೋಟಿ ರೂ.ಗೆ ಅನುಮೋದನೆ.
- ಪಾಂಡವಪುರ, ಚುಂಚನಕಟ್ಟೆಯಲ್ಲಿನ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ 40 ವರ್ಷದ ಅವಧಿಗೆ ಗುತ್ತಿಗೆ ನೀಡಲು ತೀರ್ಮಾನ.
- ಜಿಲ್ಲಾ ಮಟ್ಟದಲ್ಲಿನ ಯೋಜನಾ ಸಮಿತಿಗೆ ಜಿಲ್ಲಾ ಸಮಿತಿ ಅಧ್ಯಕ್ಷರ ಬದಲಿಗೆ ಉಸ್ತುವಾರಿ ಸಚಿವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡುವ ನಿಟ್ಟಿನಲ್ಲಿ ತಿದ್ದುಪಡಿ.