ದೊಡ್ಡಬಳ್ಳಾಪುರ: ಕೊರೊನಾ ನೇಕಾರಿಕೆ ಮೇಲೆ ಪ್ರಭಾವ ಬೀರಿದ್ದು, ಲಾಕ್ಡೌನ್ನಿಂದ ಈ ವೃತ್ತಿಯನ್ನು ಅವಲಂಬಿಸಿರುವವರ ಬದುಕು ಬೀದಿಗೆ ಬಿದ್ದಿದೆ.
ನಗರದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಕುಟುಂಬಗಳು ನೇಕಾರಿಕೆಯನ್ನು ಅವಲಂಬಿಸಿದ್ದು, ಇದರಿಂದ ಬರುವ ಆದಾಯದಿಂದ ಜೀವನ ನಡೆಸುತ್ತಿದ್ದಾರೆ. ಆದರೆ, ಪ್ರಪಂಚದಾದ್ಯಂತ ಆವರಿಸಿರುವ ಕೊರೊನಾ ಮಹಾಮಾರಿ ನೇಕಾರರ ಬದುಕನ್ನು ಕಿತ್ತುಕೊಂಡಿದ್ದು, ಒಂದೊತ್ತಿನ ಆಹಾರಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕಳೆದೊಂದು ತಿಂಗಳಿಂದ ನೇಕಾರಿಕೆ ಉದ್ಯಮದ ಮಾರುಕಟ್ಟೆ ನಿಂತು ಹೋಗಿದ್ದು, ತಯಾರಿಸಿದ ಸೀರೆಗಳು ಮಾರಾಟವಾಗದೇ ಮೂಲೆಗೆ ಸೇರಿವೆ. ಹಾಕಿದ ಬಂಡವಾಳ ಹಿಂತಿರುವ ಭರವಸೆ ಕೂಡ ಇಲ್ಲದಂತಾಗಿದೆ. ನೇಕಾರರ ಕಷ್ಟಕ್ಕೆ ಧಾವಿಸಿರುವ ನೇಕಾರರ ಹಿತರಕ್ಷಣಾ ಸಮಿತಿ ಶಾಸಕರು, ಜವಳಿ ಸಚಿವರು ಮತ್ತು ಅಧಿಕಾರಿಗಳಿಗೆ ಕೇರಳ ಮಾದರಿಯಂತೆ ನೇಕಾರರಿಗೆ ಜೀವನಾನಶ್ಯಕ 16 ವಸ್ತುಗಳನ್ನ ಉಚಿತವಾಗಿ ಕೊಡುವಂತೆ ಮನವಿ ಮಾಡಿದ್ದಾರೆ.
ನೇಕಾರಿಕೆ ಉದ್ಯಮದಿಂದ ಮಾಲೀಕರು ನಷ್ಟಕ್ಕೆ ತುತ್ತಾದರೆ, ಬೇರೆ ಕಡೆಯಿಂದ ಇಲ್ಲಿಗೆ ದುಡಿಯಲು ಬಂದ ಕಾರ್ಮಿಕರು ಆಹಾರಕ್ಕಾಗಿ ಅಲೆಯುತ್ತಿದ್ದಾರೆ. ಒಂದು ತಿಂಗಳಿಂದ ಕೆಲಸವಿಲ್ಲದೆ,ಕೈಗೆ ಸಂಬಳ ಸಿಗದೇ ಸಂಸಾರ ಹೇಗೆ ನಡೆಸಬೇಕೆನ್ನುವ ಯೋಚನೆಯಲ್ಲಿದ್ದಾರೆ.