ಬೆಂಗಳೂರು : ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಅಂತ ಮೈಕ್ನಲ್ಲಿ ಹೇಳಿ ಟ್ರಾಫಿಕ್ ಪೊಲೀಸರಿಗೆ ಸಾಕಾಗಿದೆ ಅನಿಸುತ್ತೆ. ಅದಕ್ಕೆ ಅವರು ಮತ್ತೊಂದು ರೀತಿಯ ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದ್ದಾರೆ.
ವಾಹನ ಚಾಲಕರಿಗೆ ಮಾತಿನ ಪೆಟ್ಟು ಬಿದ್ದಿಲ್ಲವೆಂದು ಗಾದೆಯ ಪೆಟ್ಟು ನೀಡಲು ಮಂದಾಗಿರುವ ಸಿಲಿಕಾನ್ ಸಿಟಿ ಪೊಲೀಸರು, ಕವನದ ಮೂಲಕ ಅರಿವು ಮೂಡಿಸಲು ಮುಂದಾಗಿದ್ದಾರೆ. ಟ್ರಾಫಿಕ್ ಪೊಲೀಸರು ಜಾಗೃತಿ ಮೂಡಿಸುವ ಸಲುವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಅಂತ ಎಷ್ಟು ಬಾರಿ ಹೇಳಿದರೂ ಜನ ಸುಧಾರಿಸುತ್ತಿಲ್ಲ. ಹೀಗಾಗಿ ಟ್ರಾಫಿಕ್ ಡಿಪಾರ್ಟ್ ಮೆಂಟ್ ಹೊಸ ಜಾಗೃತಿಗೆ ಮುಂದಾಗಿದೆ.
ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗ್ತಿದ್ದಂತೆ ಅಪಘಾತ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿವೆ. ಅದರಲ್ಲೂ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿ ಅಪಘಾತಕ್ಕೆ ಈಡಾಗುತ್ತಿದ್ದಾರೆ. ಪ್ರತಿದಿನ ಹಲವಾರು ಪ್ರಕರಣಗಳು ದಾಖಲಾಗುತ್ತಿವೆ. ಈ ನಿಟ್ಟಿನಲ್ಲಿ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಟ್ರಾಫಿಕ್ ಪೊಲೀಸರು ಗಾದೆ ಮತ್ತು ಕವನಶೈಲಿಯ ಬರಹದ ಫಲಕಗಳ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ನೇತೃತ್ವದ ತಂಡ ಕವನ ಹಾಗೂ ಗಾದೆ ಬರಹದ ಫಲಕಗಳ ಮೂಲಕ ಅರಿವು ಮೂಡಿಸಿ ಅಪಘಾತ ಪ್ರಕರಣಗಳನ್ನು ನಿಯಂತ್ರಿಸಲು ಮುಂದಾಗಿದ್ದಾರೆ. "ಹೆಲ್ಮೆಟ್ ಧರಿಸು ಹಿಂದೆ ಕುಳಿತವರಿಗೂ ಹಾಕಿಸು, ಪೊಲೀಸರು ನೋಡಲಿ ಅಂತಲ್ಲ. ಮೆದುಳಿಗೆ ಏಟು ಬಿದ್ದರೆ ಸ್ಟೆಪ್ನಿ ಇಲ್ಲ' ಹೀಗೆ ನಾನಾ ಕವನಗಳನ್ನ ಬರೆದು ಜಾಗೃತಿ ಮೂಡಿಸುತ್ತಿದ್ದಾರೆ.
ಇನ್ನು ಇದಿಷ್ಟೇ ಅಲ್ಲದೆ, ಹೆಲ್ಮೆಟ್ ಎಷ್ಟು ಪ್ರಾಮುಖ್ಯತೆ ಅನ್ನೋದನ್ನು ತಂದೆ -ಮಗನ ಸಂಭಾಷಣೆಯ ರೀತಿಯಲ್ಲಿ ಹೇಳಿ, 'ಹೆಲ್ಮೆಟ್ ಹಾಕಿಲ್ಲ ಅಂದ್ರೆ ಹೆಲ್- ಮೇಟ್' ಅನ್ನೋ ಬರಹದೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.