ಬೆಂಗಳೂರು: ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡುವ ಸಲುವಾಗಿ ಇದರ ವಿರುದ್ಧದ ಸಮರ ಮುಂದುವರೆಸುತ್ತೇವೆ, ಡ್ರಗ್ಸ್ ಜಾಲವನ್ನು ಬುಡ ಸಮೇತ ಕಿತ್ತು ಹಾಕುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಿರ್ಭಯ ಯೋಜನೆಯಡಿ ರಾಜ್ಯ ಪೊಲೀಸ್ ಇಲಾಖೆಗೆ 751 ದ್ವಿಚಕ್ರ ವಾಹನಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯದಲ್ಲಿ ಕ್ರೈಂ ರೇಟ್ ಕಡಿಮೆ ಆಗಿದೆ. ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಿದ್ದಾರೆ ಎಂದು ಶ್ಲಾಘಿಸಿದರು. ಡ್ರಗ್ಸ್ ವಿರುದ್ಧದ ಸಮರ ಮುಂದುವರೆದಿದೆ, ಇದು ಎಂದಿಗೂ ನಿಲ್ಲುವುದಿಲ್ಲ. ಡ್ರಗ್ಸ್ ಜಾಲವನ್ನು ಬುಡ ಸಮೇತ ಕಿತ್ತು ಹಾಕುವವರೆಗೂ ನಮ್ಮ ಕಾರ್ಯ ಮುಂದುವರಿಯುತ್ತದೆ ಎಂದು ಇದೇ ವೇಳೆ, ಭರವಸೆ ನೀಡಿದರು.
ಸಿಎಂ ಯಡಿಯೂರಪ್ಪ ಅವರು ಪೊಲೀಸ್ ಇಲಾಖೆಗೆ ಕೇಳಿದ ಸಹಾಯವನ್ನೆಲ್ಲ ಮಾಡುತ್ತಿದ್ದಾರೆ. ಪೊಲೀಸರ ನೆರವಿಗೆ ನಮ್ಮ ಸರ್ಕಾರ ಎಂದಿಗೂ ಬದ್ಧವಾಗಿದೆ. ಸಂಚಾರ ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವುದು ಪೊಲೀಸರ ಜವಾಬ್ದಾರಿ, ಆ ಕಾರ್ಯವನ್ನು ಅವರು ನಿರ್ವಹಿಸುತ್ತಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಆರ್ಬಿಐ, ಫೇಸ್ಬುಕ್ ಸೇರಿದಂತೆ ಮತ್ತಿತರ ಸಾಮಾಜಿಕ ಜಾಲತಾಣಗಳ ಸಿಇಒಗಳ ಜತೆ ಮಾತನಾಡುತ್ತಿದ್ದೇವೆ. ಇನ್ನು ಹೆಚ್ಚಿನ ನಿಗಾ ವಹಿಸಿ ಅಹಿತಕರ ಪೋಸ್ಟ್ಗಳನ್ನು ತಡೆಯುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಡಿಜಿಪಿ ಪ್ರವೀಣ್ ಸೂದ್ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು. ಪೊಲೀಸ್ ಇಲಾಖೆಗೆ ನೀಡಿದ ಹೊಸ ಬೈಕ್ ಕೀ ಅನ್ನು ಸಿಎಂ ಯಡಿಯೂರಪ್ಪ ಡಿಜಿಪಿಗೆ ಹಸ್ತಾಂತರಿಸಿದರು.