ಬೆಂಗಳೂರು : ಡ್ರಗ್ಸ್ ಪ್ರಕರಣ ಕುರಿತು ಸತತ ಮೂರು ಗಂಟೆಗಳ ಕಾಲ ಸ್ಯಾಂಡಲ್ವುಡ್ ತಾರಾ ದಂಪತಿ ದಿಗಂತ್ ಹಾಗೂ ಐಂದ್ರಿತಾ ರೇ ಅವರ ವಿಚಾರಣೆಯನ್ನು ನಡೆಸಲಾಗಿದೆ. ಅವಶ್ಯಕತೆ ಇದ್ದಲ್ಲಿ ವಿಚಾರಣೆಗಾಗಿ ಮತ್ತೆ ನೋಟಿಸ್ ಕೊಡಲಾಗುತ್ತದೆ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
ನೋಟಿಸ್ ನೀಡಿ ಕರೆಯಿಸಿಕೊಂಡು ಸತತ ಮೂರು ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಲಾಗಿದೆ. ಮತ್ತೊಮ್ಮೆ ವಿಚಾರಣೆಗೆ ಕರೆಯುವುದಾಗಿ ಅವರು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಐಂದ್ರಿತಾ ರೇ, ವಿಚಾರಣೆಗೆ ಸಂಪೂರ್ಣವಾಗಿ ಸಹಕಾರ ಕೊಟ್ಟಿದ್ದೇವೆ. ತನಿಖೆ ನಡೆಯುತ್ತಿದೆ. ಪೊಲೀಸರು ಮತ್ತೆ ಕರೆದರೆ ಬರುತ್ತೇವೆ ಎಂದು ತಿಳಿಸಿದ್ದಾರೆ.
ವಿಚಾರಣೆ ವೇಳೆ ದಂಪತಿ ಬಳಸುತ್ತಿದ್ದ ಎರಡು ಹೈ-ಫೋನ್ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮೊಬೈಲ್ ರಿಟ್ರೈವ್ ಮಾಡಲು ಎಫ್ಎಸ್ಎಲ್ಗೆ ಸಹ ಕಳುಹಿಸಲು ತಯಾರಿ ನಡೆಸಿದ್ದಾರಂತೆ.
ಇನ್ನು ಡ್ರಗ್ಸ್ ಕೇಸ್ನಲ್ಲಿ ನೈಜೀರಿಯಾ ಮೂಲದ ಡೊನಾಲ್ಡ್ ಉಡೇನಾ ಎಂಬ ಮತ್ತೋರ್ವ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಮೂವರು ಹೆಸರಿನಲ್ಲಿ ಮೂರು ಮೊಬೈಲ್ಗಳನ್ನು ಬಳಸಿಕೊಂಡು ನಿರಂತರವಾಗಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ.
ಖಚಿತ ಮಾಹಿತಿ ಮೇರೆಗೆ ಯಲಹಂಕದಲ್ಲಿ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ 12 ಗ್ರಾಂ ಕೊಕೈನ್ ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.