ಬೆಂಗಳೂರು: ಸ್ಥಳೀಯ ಪೊಲೀಸರು, ಬಿಬಿಎಂಪಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಮೇಲೆ, ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಬೆಂಗಾವಲು ಪಡೆ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಕೇಂದ್ರ ಚುನಾವಣಾಧಿಕಾರಿ ಹಾಗೂ ಮುಖ್ಯ ಚುನಾವಣಾಧಿಕಾರಿ ಸೂಚನೆ ಮೇರೆಗೆ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ನಂತರ ಮಾತನಾಡಿ, ಚುನಾವಣಾ ನೀತಿ ಸಂಹಿತೆಯಂತೆ ರಿಟರ್ನಿಂಗ್ ಆಫೀಸರ್ ಕಚೇರಿ ಒಳಗೆ ಬಿಡುವ ವ್ಯಕ್ತಿಗಳ ಸಂಖ್ಯೆಯನ್ನ ನಿಗದಿಗೊಳಿಸಲಾಗಿತ್ತು. ಡಿಸಿಪಿಗೆ ಎಲ್ಲ ಸೂಚನೆಗಳನ್ನ ನೀಡಲಾಗಿತ್ತು. ಚುನಾವಣಾ ಆಯೋಗದ ನಿಯಮ ಉಲ್ಲಂಘನೆಯಾದಾಗ ಕೇಸ್ ಬುಕ್ ಮಾಡುತ್ತಾರೆ. ಕಚೇರಿ ಒಳಗಡೆ ವಾಹನ ತೆಗೆದುಕೊಂಡು ಹೋಗಬಾರದು ಎಂಬ ನಿಯಮವಿದ್ದರೂ ವಾಹನ ತೆಗೆದುಕೊಂಡು ಹೋಗಲಾಗಿದೆ. ಹೀಗಾಗಿ ನಿಯಮ ಉಲ್ಲಂಘಿಸಿದ್ದವರ ವಿರುದ್ಧ ನಾವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.