ಬೆಂಗಳೂರು: ಜಾತ್ಯತೀತ ಜನತಾದಳ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಜನತಾ ಜಲಧಾರೆ ಪವಿತ್ರ ಜಲದ ಕಳಸ ಪ್ರತಿಷ್ಠಾಪನೆ ಹಾಗೂ ಗಂಗಾ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಪಕ್ಷದ ಹಿರಿಯ ಮುಖಂಡರು ಭಾಗಿಯಾಗಿದ್ದರು.
ಪೂಜೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್. ಡಿ. ಕುಮಾರಸ್ವಾಮಿ, ಇವತ್ತಿನ ದಿನ ಕಳಸ ಪೂಜೆಯನ್ನು ಮಾಡುತ್ತಿದ್ದೇವೆ. ಹನುಮ ಜಯಂತಿ ದಿನ ಜನತಾ ಜಲಧಾರೆ ಕಾರ್ಯಕ್ರಮ ಆರಂಭ ಮಾಡಿದ್ವಿ. 15 ನದಿಗಳ ಕಳಸದ ನೀರನ್ನು ಪ್ರಧಾನ ಕಳಸಕ್ಕೆ ಹಾಕಿ ಪೂಜೆ ಮಾಡಲಾಗುತ್ತೆ. ಪ್ರಧಾನ ಕಳಸದ ಪರಿಶುದ್ಧತೆ ಮಾಡಲು 15 ಪಂಡಿತರಿಂದ ಪೂಜೆ ಮಾಡಿಸಲಾಗುತ್ತಿದೆ. ಪ್ರತಿದಿನ ಪ್ರಧಾನ ಕಳಸಕ್ಕೆ ವಿಧಿ ವಿಧಾನಗಳಂತೆ ಪೂಜೆ ನಡೆಯುತ್ತೆ. ಮುಂದಿನ 2023 ಚುನಾವಣೆಯ ತನಕ ಪೂಜೆ ನಡೆಯುತ್ತದೆ ಎಂದು ಹೇಳಿದರು.
ಪಕ್ಷ ವಿಸರ್ಜನೆ: ನಮ್ಮ ಸಂಕಲ್ಪವನ್ನು ನಾಡಿನ ಜನತೆಗೆ ತಲುಪಿಸಲು ಗಂಗಾ ಮಾತೆ ಶಕ್ತಿ ಕೊಡಲಿ ಎಂದು ನವಗ್ರಹ ಕಳಸ ಪೂಜೆ ಮಾಡಿಸಲಾಗುತ್ತಿದೆ. ನಮ್ಮ ನದಿಯ ನೀರು ಬಳಸಿಕೊಳ್ಳಲು ಕಾನೂನು ತೊಡಕು ಮತ್ತು ಆರ್ಥಿಕ ಕೊರತೆ ಇದೆ. ಇದನ್ನು ನಿವಾರಿಸಲು ಸರ್ಕಾರ ಬದ್ಧತೆಯನ್ನು ತೋರುತ್ತಿಲ್ಲ. ಅರ್ಥಿಕ ಸಂಪನ್ಮೂಲವನ್ನು ಒದಗಿಸುವ ಕೆಲಸ ಕೂಡ ಮಾಡುತ್ತಿಲ್ಲ. ಕರ್ನಾಟಕದ ನೀರಾವರಿ ಯೋಜನೆಗೆ ಸಾಕಷ್ಟು ಹಣ ಬೇಕು. ಪಂಚರತ್ನ ಸೇರಿ ಈ ಎಲ್ಲಾ ಭರವಸೆ ಈಡೇರಿಸಬೇಕಾದ್ರೆ ಜನ 5 ವರ್ಷದ ಆಡಳಿತ ನಡೆಸಲು ಅಧಿಕಾರ ಕೊಡಬೇಕು. ಅದಕ್ಕೆ ನಮಗೆ ದೇವರ ಆರ್ಶಿವಾದವೂ ಬೇಕು. ಈ ಎಲ್ಲಾ ಕಾರ್ಯಕ್ರಮಗಳನ್ನು ಪೂರೈಸಲು ಸರ್ಕಾರ ಬೇಕು. 5 ವರ್ಷಗಳಲ್ಲಿ ನಾವು ಹೇಳಿದ ಕಾರ್ಯಕ್ರಮ ಪೂರ್ಣ ಮಾಡದಿದ್ರೆ ಪಕ್ಷ ವಿಸರ್ಜನೆ ಮಾಡುತ್ತೇವೆ ಎಂದು ಶಪಥ ಮಾಡಿದರು.
ರಾಜಕೀಯ ಚರ್ಚೆ: ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ದೇವೇಗೌಡರ ಭೇಟಿ ವಿಚಾರ ಮಾತನಾಡಿ, ಇದೊಂದು ರಾಜಕೀಯ ಭೇಟಿ, ಮುಂದಿನ ರಾಜಕೀಯದ ಬಗ್ಗೆ ಚರ್ಚೆ ಆಗುತ್ತದೆ. ಪ್ರಾದೇಶಕ ಪಕ್ಷಗಳು ಒಂದಾಗುವ ನಿಟ್ಟಿನಲ್ಲಿ ಈಗಾಗಲೇ ಚರ್ಚೆಗಳು ಪ್ರಾರಂಭ ಆಗಿವೆ. ಇದು ಅದರ ಮುಂದುವರೆದ ಭಾಗವಾಗಿದೆ. ಪ್ರಾದೇಶಿಕ ಪಕ್ಷದ ಸಿಎಂಗಳು ಈಗಾಗಲೇ ಚರ್ಚೆ ಪ್ರಾರಂಭಿಸಿದ್ದಾರೆ. ಮುಂದಿನ ರಾಜಕೀಯ ಸನ್ನಿವೇಶಗಳ ಕುರಿತು ಚರ್ಚೆ ಮಾಡಲಾಗುತ್ತದೆ. 2023 ಕರ್ನಾಟಕ ಚುನಾವಣೆ 2024 ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ರಾಜ್ಯದ ಚುನಾವಣೆಯೇ ಮುಂದಿನ ಲೋಕಸಭೆ ಮೇಲೆ ಪರಿಣಾಮ ಬೀರುವ ಚುನಾವಣೆ ಆಗುತ್ತದೆ ಎಂದು ತಿಳಿಸಿದರು.
ತೃತೀಯ ರಂಗ ವಿಚಾರದ ಬಗ್ಗೆ ಮಾತನಾಡಿ, ಈಗಾಗಲೇ ಅದನ್ನ ಹೇಳಲು ಆಗೊಲ್ಲ. ಆದ್ರೆ ಈ ನಿಟ್ಟಿನಲ್ಲಿ ಚರ್ಚೆಗಳು ಶುರುವಾಗಿವೆ. ಕರ್ನಾಟಕದ ಚುನಾವಣೆ 2024ರ ಚುನಾವಣೆಗೆ ಮುಖ್ಯ ಆಗಲಿದೆ ಎಂದರು.
ಇದನ್ನೂ ಓದಿ: 'ಪರಿವಾರವಾದಿ' ಪಕ್ಷಗಳು ಪ್ರಜಾಪ್ರಭುತ್ವ-ಯುವ ಜನತೆಯ ದೊಡ್ಡ ಶತ್ರು: ಮೋದಿ ವಾಗ್ದಾಳಿ