ಬೆಂಗಳೂರು: ನಗರದಲ್ಲಿ ಒಂದು ವಾರದಿಂದ ಪೂರ್ವ ಮುಂಗಾರು ಮಳೆ ಆರ್ಭಟ ಜೋರಾಗಿದೆ. ಈಗಾಗಲೇ ನಾಲ್ನೂರಕ್ಕೂ ಹೆಚ್ಚು ಮರ- ಕೊಂಬೆಗಳು ಬಿದ್ದು ಆಸ್ತಿ- ಪಾಸ್ತಿ ಹಾನಿಯಾಗಿವೆ. ಆದರೆ, ಪಾಲಿಕೆ ಆಯುಕ್ತರು ಮಾತ್ರ ಮಳೆಹಾನಿ ಆಗದಂತೆ ಬಿಬಿಎಂಪಿ ಸರ್ವಸನ್ನದ್ಧವಾಗಿ ಎಂದು ಹೇಳ್ತಿದ್ದಾರೆ. ಅಲ್ಲದೇ ಇಪ್ಪತ್ನಾಲ್ಕು ಗಂಟೆಯಲ್ಲಿ ಮರಗಳನ್ನು ರಸ್ತೆಯಿಂದ ತೆರವು ಮಾಡಲಾಗುತ್ತಿದೆ. 48 ಗಂಟೆಯಲ್ಲಿ ಆ ಜಾಗದಿಂದಲೇ ಕ್ಲಿಯರ್ ಮಾಡಲಾಗುತ್ತಿದೆ ಎಂದಿದ್ದಾರೆ.
ಮುಂದೆ ಮುಂಗಾರು ಮಳೆ ಎದುರಿಸಲು ಪಾಲಿಕೆ ಸಿದ್ಧತೆ ನಡೆಸಿರುವ ಬಗ್ಗೆ ಮಾತನಾಡಿದ ಅವರು, ಮೂರು ಸಭೆಗಳನ್ನು ಈ ಬಗ್ಗೆ ಈಗಾಗಲೇ ನಡೆಸಲಾಗಿದೆ. ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಟಾಸ್ಕ್ ಫೋರ್ಸ್ ತಂಡಗಳನ್ನು ಸಿದ್ದತೆ ಮಾಡಿದ್ದೇವೆ ಎಂದರು. ವಲಯಮಟ್ಟದಲ್ಲಿ ಕಂಟ್ರೋಲ್ ರೂಂ ಆರಂಭಿಸಲಾಗಿದೆ. ತಾತ್ಕಾಲಿಕವಾಗಿ 63 ಕಂಟ್ರೋಲ್ ರೂಂ ರಚಿಸಲಾಗಿದೆ. ಮರ, ಕೊಂಬೆ ಬಿದ್ದು ರಸ್ತೆಗೆ ಅಡೆತಡೆ ಉಂಟಾದಾಗ ತೆರವು ಮಾಡಲು 28 ತಂಡಗಳನ್ನು ಮಾಡಲಾಗಿದೆ. ಈ ತಂಡಕ್ಕೆ ಬೇಕಾದ ಕಾರ್ಮಿಕರು, ಯಂತ್ರೋಪಕರಣಗಳನ್ನು ನೀಡಲಾಗಿದೆ. ವಲಯದಲ್ಲೇ ಬೇಕಾದರೇ ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿ ಕೆಲಸ ಮಾಡಲು ತಿಳಿಸಲಾಗಿದೆ ಎಂದರು.
ಮೂರು ದಿನದಲ್ಲಿ ಬಿದ್ದ ಮರಗಳನ್ನು ತೆಗೆಯಲು ಇಪ್ಪತ್ತನಾಲ್ಕು ಗಂಟೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ದೂರು ಇದ್ದರೂ, 24 ಗಂಟೆಯಲ್ಲಿ ರಸ್ತೆ ಸ್ವಚ್ಛ ಮಾಡಿದ್ದೇವೆ, 48 ಗಂಟೆಯಲ್ಲಿ ಫುಟ್ಪಾತ್ ಕೂಡಾ ತೆರವು ಮಾಡಲಾಗಿದೆ ಎಂದರು. ಅಲ್ಲದೇ ವಾರ್ಡ್ ಇಂಜಿನಿಯರ್ಸ್ಗಳಿಗೂ ಈಗಾಗಲೇ ಸೂಚನೆ ನೀಡಲಾಗಿದೆ. ಸಣ್ಣ ಪುಟ್ಟ ಒಣಗಿದ ಕೊಂಬೆ ಬಿದ್ದಿದ್ದರೂ ಗುಡಿಸಿ, ಸ್ವಚ್ಛಗೊಳಿಸುವಂತೆ ತಿಳಿಸಲಾಗಿದೆ ಎಂದರು. ಇನ್ನು ಹಲವೆಡೆ ಅಪಾಯಕಾರಿ ಸ್ಥಿತಿಯಲ್ಲಿ ಮರದಲ್ಲೆ ನೇತಾಡುವ ಕೊಂಬೆಗಳನ್ನು ತೆರವು ಮಾಡಲಾಗುವುದು ಎಂದರು.