ಬೆಂಗಳೂರು: ಅನುದಾನಿತ ಶಾಲೆಗಳಲ್ಲಿ ಫಲಿತಾಂಶ ಗಣನೀಯವಾಗಿ ಇಳಿಯುತ್ತಿರುವುದು ದೊಡ್ಡ ಸಮಸ್ಯೆ. ಇದರ ಸುಧಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯ ಡಾ. ವೈ.ಎ.ನಾರಾಯಣ ಸ್ವಾಮಿ ನಿಯಮ 72ರ ಅಡಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ರಾಜ್ಯದ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಯನ್ನು ಕಾಲಕಾಲಕ್ಕೆ ಭರ್ತಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಫಲಿತಾಂಶ ಹೆಚ್ಚಳಕ್ಕೆ 2020ರ ನಂತರದ ಖಾಲಿ ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳುತ್ತೇನೆ. ಕೆಲವರು ಹೋರಾಟಕ್ಕೆ ಇಳಿದಿದ್ದಾರೆ, ಅವರನ್ನೂ ಮಾತನಾಡಿಸುತ್ತೇನೆ. ಮಕ್ಕಳಿಗೆ ಉತ್ತಮ ಶಿಕ್ಷಣ, ಆಹಾರ ದೊರಕಿಸಲು ಕ್ರಮ ಕೈಗೊಳ್ಳುತ್ತೇನೆ. ಸಚಿವನಾಗಿ ಹೆಚ್ವು ಅನುಭವ ಇಲ್ಲದಿದ್ದರೂ, ಶಾಲೆ ನಡೆಸಿದ ಅನುಭವ ಇದೆ. ಇದರಿಂದ ಸಕಾಲಕ್ಕೆ ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದರು.
ಸದಸ್ಯರಾದ ಶಶಿಲ್ ನಮೋಶಿ, ಎಸ್.ವಿ.ಸಂಕನೂರು ಹಾಗೂ ಮತ್ತಿತರ ಸದಸ್ಯರು, ಶಿಕ್ಷಕರ ಸಮಸ್ಯೆ, ನಿವೃತ್ತಿ ನಂತರ ಶಿಕ್ಷಕರ ಸ್ಥಾನಕ್ಕೆ ಹೊಸ ಶಿಕ್ಷಕರ ನೇಮಕ ವಿಳಂಬಕ್ಕೆ ಪರಿಹಾರ ಕಂಡುಕೊಳ್ಳಬೇಕೆಂಬ ಮಾಹಿತಿ ನೀಡಿದರು. ಈ ಚರ್ಚೆಯ ಸಂದರ್ಭ ಸದಸ್ಯರ ಪ್ರಶ್ನೆಗೆ ವಿಸ್ತೃತ ಉತ್ತರ ನೀಡಿದ ಅವರು, ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ 2015ರ ಡಿಸೆಂಬರ್ರವರೆಗೆ ಖಾಲಿ ಆಗಿರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಅದರಂತೆ 2015ರ ಡಿಸೆಂಬರ್ 31ರ ಪೂರ್ವದಲ್ಲಿ ಖಾಲಿಯಾದ ಎಲ್ಲ ಅರ್ಹ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ಕೋರಿ ಆಡಳಿತ ಮಂಡಳಿಗಳಿಂದ ಸ್ವೀಕೃತವಾದ ಪ್ರಸ್ತಾವನೆಗಳಿಗೆ ನಿಯಮಾನುಸಾರ ಪರಿಶೀಲಿಸಿ ಅನುದಾನಸಹಿತವಾಗಿ ಅನುಮೋದಿಸಲಾಗುತ್ತಿದೆ. ಜಿಲ್ಲೆಗಳಲ್ಲಿ ಕಾರ್ಯಭಾರ ಕಡಿಮೆ ಇರುವ ಅನುದಾನಿತ ಶಾಲೆಗಳ ಶಿಕ್ಷಕರನ್ನು ಅಗತ್ಯವಿರುವ ಶಾಲೆಗಳಿಗೆ ಮರು ನಿಯೋಜನೆಗೊಳಿಸಲು ಜಿಲ್ಲಾ ಉಪನಿರ್ದೇಶಕರ ಹಂತದಲ್ಲಿ ಕ್ರಮವಹಿಸಲಾಗುತ್ತಿದೆ ಎಂದರು.
ಮುಂದುವರಿದು, 2016ರ ಜನವರಿ 1ರ ನಂತರ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಆರ್ಥಿಕ ಇಲಾಖೆಯ ಸಹಕಾರವನ್ನು ಕೋರಲಾಗಿತ್ತು. ಆದರೆ, ಆರ್ಥಿಕ ಇಲಾಖೆಯು 2022ರ ನವೆಂಬರ್ 28ರಂದು ನೀಡಿರುವ ಅಭಿಪ್ರಾಯದಲ್ಲಿ 2015ರ ಡಿಸೆಂಬರ್ ಅಂತ್ಯಕ್ಕೆ ಖಾಲಿಯಾಗಿರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಆದ್ಯತೆ ನೀಡುವಂತೆ ತಿಳಿಸಿರುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಖಾಲಿಯಾಗಿರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಿದ ನಂತರ 2016ರ ನಂತರ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡಲು ನಿಯಮಾನುಸಾರ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಅಧಿವೇಶನದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ: ಪರಿಷತ್ನ ಜೆಡಿಎಸ್ ಸದಸ್ಯ ಗೋವಿಂದರಾಜು ನಿಯಮ 72ರ ಅಡಿ ಪ್ರಸ್ತಾಪಿಸಿದ ಎಪಿಎಂಸಿ ಸ್ಥಿತಿ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟೀಲ್, ಇದೇ ಅಧಿವೇಶನದಲ್ಲಿಯೇ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ಹೊಸ ರೂಪ ಕೊಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.
ಹಿಂದಿನ ಸರ್ಕಾರವು ರೈತ ಬೆಳೆಗಾರರಿಗೆ ಹತ್ತಿರದಲ್ಲಿಯೇ ಸರಳಿಕೃತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಸುಗ್ರೀವಾಜ್ಞೆಯ ಮೂಲಕ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಅಧಿನಿಯಮ ಜಾರಿಗೆ ತಂದಿತ್ತು. ಇಲ್ಲಿನ ಕೆಲವಷ್ಟು ನಿರ್ಧಾರಗಳನ್ನ ಪರಿಷ್ಕರಿಸಿ ನಾವು ಹೊಸ ಕಾಯ್ದೆ ತರುತ್ತಿದ್ದೇವೆ. ಮಾರುಕಟ್ಟೆ ಕಾಯ್ದೆ ತಿದ್ದುಪಡಿ ನಂತರ ಲೈಸೆನ್ಸ್ ಪಡೆದು ಮಾರುಕಟ್ಟೆ ಪ್ರಾಂಗಣದಲ್ಲಿ ವ್ಯಾಪಾರ ವಹಿವಾಟು ನಡೆಸುವ ಪೇಟೆ ಕಾರ್ಯಕರ್ತರಿಗೂ ಸಮಾನ ಅವಕಾಶ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಾರುಕಟ್ಟೆ ಸಮಿತಿ ಆಕರಿಸುತ್ತಿದ್ದ ಮಾರುಕಟ್ಟೆ ಶುಲ್ಕ ಬಳಕೆದಾರ ಶುಲ್ಕ ದರವನ್ನು ಶೇ1.5ರಿಂದ 0.60ಕ್ಕೆ ನಿಗದಿಪಡಿಸಿದೆ. ಈ ಕಾಯ್ದೆ ತಿದ್ದುಪಡಿಯನ್ನು ಕಳೆದ ಸರ್ಕಾರ ಮಾಡಿದ ನಂತರ ಮಾರುಕಟ್ಟೆ ಶುಲ್ಕ ಸಂಗ್ರಹಣೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಮಾರುಕಟ್ಟೆ ಶುಲ್ಕದ ದರದಲ್ಲಿ ಮೂಲ ಸೌಕರ್ಯ ಕಲ್ಪಿಸುವುದು, ಭದ್ರತೆ ಸ್ವಚ್ಛತೆ ಆಡಳಿತ ನಿರ್ವಹಣೆ ಮಾಡಲು ಆರ್ಥಿಕವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಕಷ್ಟ ಸಾಧ್ಯವಾಗಿದೆ ಎಂದರು.
ಈ ಎಲ್ಲ ಸಮಸ್ಯೆಗಳನ್ನು ಮನಗಂಡ ನಮ್ಮ ಸರ್ಕಾರವು ಮಾರುಕಟ್ಟೆ ಪ್ರಾಂಗಣಗಳ ಹೊರಗಡೆ ಮಾರುಕಟ್ಟೆ ಕ್ಷೇತ್ರದಲ್ಲಿ ನಡೆಯುವ ವ್ಯಾಪಾರ ವಹಿವಾಟಿನ ಮೇಲೆ ಈ ಮೊದಲಿನಂತೆ ನಿಯಂತ್ರಣ ಹೊಂದುವುದು ರೈತ ಬೆಳೆಗಾರರ ಹಿತ ದೃಷ್ಟಿಯಿಂದ ಅವಶ್ಯಕತೆ ಇರುವುದರಿಂದ ಹೊಸ ತಿದ್ದುಪಡಿ ತರಲು ಮುಂದಾಗಿದೆ. ಜೂನ್ 15ರಂದು ನಡೆದ ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದ್ದು, ಮುಂದಿನ ಕ್ರಮಕ್ಕಾಗಿ ಸಂಸದೀಯ ವ್ಯವಹಾರಗಳ ಶಾಸನ ರಚನೆ ಇಲಾಖೆಗೆ ಕಳುಹಿಸಲಾಗಿದೆ ಎಂಬ ಮಾಹಿತಿ ನೀಡಿದರು.
ಎಪಿಎಂಸಿ ಸ್ಥಿತಿ ಕುರಿತು ಪ್ರಸ್ತಾಪಿಸಿದ್ದ ಗೋವಿಂದರಾಜು, ಮೂರು ವರ್ಷದ ಹಿಂದೆ ಕೋಟ್ಯಂತರ ರೂಪಾಯಿ ಆದಾಯ ತರುತ್ತಿದ್ದ ಎಪಿಎಂಸಿ ಈಗ ಕಚೇರಿ ವಿದ್ಯುತ್ ಮತ್ತು ನೀರಿನ ಶುಲ್ಕ ಪಾವತಿಸಲಾಗದೇ ಮುಚ್ಚುವ ಸ್ಥಿತಿ ತಲುಪಿವೆ. ಹಿಂದಿನ ಸರ್ಕಾರ ಜಾರಿಗೊಳಿಸಿದ ಎಪಿಎಂಸಿ 2020ರ ತಿದ್ದುಪಡಿ ಕಾಯ್ದೆ ಬಳಿಕ ರಾಜ್ಯದ 162 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಎಪಿಎಂಸಿಯಿಂದ ಹೊರಗೆ ಮುಕ್ತ ವ್ಯಾಪಾರ ಇರುವುದರಿಂದ ವರ್ತಕರ ಹೆಸರಿಗಷ್ಟೇ ಎಪಿಎಂಸಿ ಒಳಗೆ ಮಳಿಗೆ ತೆಗೆದುಕೊಂಡು ತಮ್ಮ ವಹಿವಾಟನ್ನು ಸಂಪೂರ್ಣವಾಗಿ ಹೊರಗಡೆ ನಡೆಸುತ್ತಿದ್ದಾರೆ. ರೈತರ ಹಿತ ದೃಷ್ಟಿಯಿಂದ ಈ ವಿಚಾರವೂ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ದುಬಾರಿ ಸೋಲಾರ್ ವಿದ್ಯುತ್ ದರ ಖರೀದಿ ಅಕ್ರಮ ಸಿಬಿಐ ತನಿಖೆಗೆ ನೀಡಿದರೆ ಸತ್ಯ ಗೊತ್ತಾಗುತ್ತೆ: ಕುಮಾರಸ್ವಾಮಿ