ಬೆಂಗಳೂರು: ಕಳಸಾ ಬಂಡೂರಿ ಹಾಗೂ ಮಹದಾಯಿ ಹೋರಾಟ ನ್ಯಾಯಯುತವಾಗಿದೆ. ರಾಜ್ಯಪಾಲರು ಅವರ ಮನವಿ ಸ್ವೀಕರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮಾಜಿ ಸಂಸದ ಉಗ್ರಪ್ಪ ಒತ್ತಾಯಿಸಿದರು.
ಎರಡು ದಿನಗಳಿಂದ ನಗರದ ರೇಲ್ವೆ ನಿಲ್ದಾಣದ ಬಳಿ ಅಹೋರಾತ್ರಿ ಧರಣಿ ಕುಳಿತಿರುವ ಮಹಾದಾಯಿ ಹೋರಾಟಗಾರರನ್ನು ವಿ.ಎಸ್ ಉಗ್ರಪ್ಪ, ಮಾಜಿ ಮೇಯರ್ ರಾಮಚಂದ್ರಪ್ಪ ಭೇಟಿ ಮಾಡಿದರು.
ಅಂತಾರಾಜ್ಯ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಕರಣ ನೀಡಿದ ತೀರ್ಪಿನಂತೆ ನೀರು ಬಳಸಿಕೊಳ್ಳುವುದು ಆಯಾ ಸರ್ಕಾರಗಳ ಜವಾಬ್ದಾರಿ. ಆದರೆ, ರಾಜ್ಯದ ಹಿತ ಕಾಪಾಡುವಲ್ಲಿ ವಿಳಂಬವಾಗುತ್ತಿದೆ ಎಂದರು.
ಇಲ್ಲಿ ಯಾವುದೇ ರಾಜಕಾರಣ ಮಾಡಲು ಬಂದಿಲ್ಲ. ತಮಿಳುನಾಡಿನಲ್ಲಿ ರೈತರ ಸಮಸ್ಯೆಗೆ ಆಡಳಿತ ಪಕ್ಷ, ವಿರೋಧ ಪಕ್ಷ ಹಾಗೂ ರಾಜ್ಯಪಾಲರು ಎಲ್ಲರೂ ಒಗ್ಗಟ್ಟಾಗಿ ಪ್ರಧಾನಿಗಳನ್ನು ಭೇಟಿಯಾಗುತ್ತಾರೆ. ಆದರೆ, ರಾಜ್ಯದಲ್ಲಿ ರೈತರು ಎಷ್ಟೇ ಹೋರಾಡಿದರೂ, ರಾಜಕೀಯ ಪಕ್ಷಗಳ ಬೆಂಬಲ ಸಿಗುವುದಿಲ್ಲ ಎಂದು ಹೋರಾಟಗಾರ ವೀರೇಶ್ ಸೊಬರದಮಠ ಬೇಸರ ವ್ಯಕ್ತಪಡಿಸಿದರು.