ಬೆಂಗಳೂರು: ನಾವೆಲ್ಲರೂ ಒಂದಾಗಿ ಬಿಜೆಪಿಯನ್ನು ಸೋಲಿಸುವ ಮೂಲಕ ಮತ್ತೆ ಪ್ರಧಾನಿಯಾಗುವ ಆಸೆ ಇಟ್ಟುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ಮುರಿಯಬೇಕು ಎಂದು ಕೇಂದ್ರ ಮಾಜಿಸಚಿವೆ ಮಾರ್ಗರೇಟ್ ಆಳ್ವಾ ಹೇಳಿದರು.
ಕಾಂಗ್ರೆಸ್ ಮಹಿಳಾ ಘಟಕದಿಂದ ನಗರದ ಕೆಪಿಸಿಸಿ ಕಚೇರಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರಿಗೆ ಸನ್ಮಾನ ಮಾಡಿ ಮಾತನಾಡಿದ ಅವರು, ಬರುವ ಚುನಾವಣೆಯಲ್ಲಿ ಧರ್ಮ, ರಾಜಕೀಯ, ಭಾಷೆಯನ್ನ ಕೆಡಿಸುತ್ತಿರುವ ಮೋದಿ, ಅನಂತ್ಕುಮಾರ್ ಹೆಗಡೆ ಸೇರಿದಂತೆ ಬಿಜೆಪಿ ಪಕ್ಷವನ್ನು ಸೋಲಿಸಬೇಕು. ಮತ್ತೆ ಬಿಜೆಪಿ ಆಡಳಿತಕ್ಕೆ ಬಂದರೆ ಸಂವಿಧಾನವನ್ನೇ ಹಾಳು ಮಾಡುತ್ತಾರೆ. ಐದು ವರ್ಷ ಇದ್ದುಕೊಂಡು ರಾಮ ಮಂದಿರದತ್ತ ತಲೆಯೂ ಹಾಕಲಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಮ ನೆನಪಾದನೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ಮಾತನಾಡಿದವರೆಲ್ಲ ರಾಷ್ಟ್ರದ್ರೋಹಿಗಳಾಗುತ್ತಾರೆ. ಮೋದಿಗೆ ಜೈ ಜೈ ಅಂದರೆ ಮಾತ್ರ ದೇಶಪ್ರೇಮಿಗಳಾ ಎಂದು ಪ್ರಶ್ನಿಸಿದ ಮಾರ್ಗರೇಟ್ ಆಳ್ವಾ, ತಮ್ಮ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡೋ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದರು.