ಬೆಂಗಳೂರು: ನಾಡಿನ ಜನರ ಅಪೇಕ್ಷೆಗೆ ಪೂರಕವಾಗಿ ಶುಕ್ರವಾರ ರಾಜ್ಯ ಸರ್ಕಾರ ಕೋವಿಡ್ ನಿಯಮಗಳನ್ನು ಸ್ವಲ್ಪ ಸಡಿಲಿಕೆ ಮಾಡಿ ವಿಜೃಂಭಣೆಯಿಂದ ಸಮಸ್ತ ಜನತೆಗೆ ವಿನಾಯಕ ಚತುರ್ಥಿಯನ್ನು ಆಚರಿಸಲು ಅವಕಾಶ ಮಾಡಿಕೊಡಲಾಗಿತ್ತು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ತಿಳಿಸಿದರು.
ಸ್ಯಾಂಕಿ ಕೆರೆಯಲ್ಲಿ ಶುಕ್ರವಾರ ರಾತ್ರಿ ಮೊದಲ ದಿನದ ಗಣೇಶ ಮೂರ್ತಿಗಳ ನಿಮಜ್ಜನಕ್ಕೆ ಮಾಡಿರುವ ವ್ಯವಸ್ಥೆಯನ್ನು ವೀಕ್ಷಿಸಿ ಈಟಿವಿ ಭಾರತದ ಜೊತೆ ಮಾತನಾಡಿದರು. ಈ ಹಬ್ಬದಲ್ಲಿ ಚಿಕ್ಕ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಶ್ರದ್ಧೆ, ಭಕ್ತಿ, ಆಸಕ್ತಿಯಿಂದ ವಿನಾಯಕನನ್ನು ಕರೆತಂದಿರುವುನ್ನು ನೋಡಿ ಆನಂದವಾಗಿದೆ. ನನಗೆ ಶಕ್ತಿ ತುಂಬಿದಂತಾಗುತ್ತಿದೆ ಎಂದರು.
ಸ್ಯಾಂಕಿ ಕೆರೆಯ ಕಲ್ಯಾಣಿಯ ಕಡೆ ಸಾಕಷ್ಟು ಜನ:
ವಿನಾಯಕನೆಂದರೆ ಎಲ್ಲಾ ವಯಸ್ಸಿನವರಿಗೂ ತುಂಬಾ ಪ್ರೀತಿ ಭಕ್ತಿ ಇದೆ. ಜನತೆ ಸ್ಯಾಂಕಿ ಕೆರೆಯ ಕಲ್ಯಾಣಿಯ ಕಡೆ ಸಾಕಷ್ಟು ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ. ಬೇರೆ ಕೆರೆಗಳಲ್ಲಿ ಸಾಕಷ್ಟು ನಿರ್ಬಂಧವಿದ್ದು, ವ್ಯವಸ್ಥೆ ಸರಿಯಾಗಿರದ ಕಾರಣ ಸ್ಯಾಂಕಿ ಕೆರೆಯ ಕಡೆ ಬರುವವರ ಸಂಖ್ಯೆ ಸಾಕಷ್ಟು ಕಂಡು ಬರುತ್ತಿದೆ. ಅಧಿಕಾರಿಗಳಿಗೂ ಈ ಸಂದರ್ಭದಲ್ಲಿ ಕಠಿಣ ಕೈಗೊಳ್ಳಬೇಕೋ ಬೇಡವೋ ಎನ್ನುವ ಸವಾಲಿದೆ. ಆದರೆ, ವ್ಯವಸ್ಥೆ ಇನ್ನೂ ಉತ್ತಮವಾಗಿ ಮಾಡಬಹುದಾಗಿತ್ತಾದರೂ ಸದ್ಯಕ್ಕೆ ಅನುಕೂಲಕರ ವ್ಯವಸ್ಥೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇದು ಸಮಾಜದ ಹಬ್ಬ:
ಆಯುಕ್ತರು ನಿಮಜ್ಜನಕ್ಕೆ 3 ದಿನ ಅವಕಾಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಷ್ಟೂ ದಿನ ಸ್ಯಾಂಕಿ ಕೆರೆಯಲ್ಲಿ ವ್ಯವಸ್ಥಿತವಾಗಿ ಅವಕಾಶ ಮಾಡಿಕೊಡಲಿದ್ದೇವೆ. ನಿನ್ನೆಯಿಂದ ಆರಂಭವಾಗಿರುವ ಈ ವ್ಯವಸ್ಥೆ ಒಟ್ಟು ಮೂರು ದಿನ ಇರುತ್ತದೆ. ಒಟ್ಟಾರೆಯಾಗಿ ಆರೋಗ್ಯ ಸಿಬ್ಬಂದಿ ಆ್ಯಂಬುಲೆನ್ಸ್, ಪೊಲೀಸರು ಬ್ಯಾರಿಕೇಡ್ ವ್ಯವಸ್ಥೆ ಸೇರಿ ಎಲ್ಲಾ ಸಂಬಂಧಿತ ಇಲಾಖೆಯ ಸಿಬ್ಬಂದಿ ಸೇರಿ ಒಟ್ಟಾರೆಯಾಗಿ ಕೆಲಸ ಮಾಡುತ್ತಿದ್ದಾರೆ. ಇದು ಸಮಾಜದ ಹಬ್ಬ, ಎಲ್ಲರಿಗೂ ಇಷ್ಟವಾಗುವ ಹಬ್ಬ. ಆದ್ದರಿಂದ ಜನತೆಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ ಎಂದು ಸಚಿವರು ಹೇಳಿದರು.
ಎಲ್ಲರೂ ವಿನಾಯಕ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡೋಣ. ನಿರ್ಬಂಧಗಳನ್ನು ಗೌರವಿಸಿ, ಪಾಲಿಸಿ ಆಚರಣೆ ಮಾಡಿದರೆ ಯಾವುದೇ ತೊಂದರೆಯಾಗುವುದಿಲ್ಲ. ಜನರು ಯಾವುದೇ ವಿಜ್ಞಗಳಿಲ್ಲದೆ, ಸಮಸ್ಯೆಗಳಿಲ್ಲದೆ ಆಚರಣೆ ಮಾಡಬೇಕು. ಅಧಿಕಾರಿಗಳು ಕೂಡ ಸಾಕಷ್ಟು ಗಮನ ವಹಿಸಬೇಕು ಎಂದು ಕಿವಿಮಾತು ಹೇಳಿದರು.