ವಾಹನಗಳ ಓಡಾಟಕ್ಕೆ ಉತ್ತಮ ರಸ್ತೆ ನಿರ್ಮಾಣ ಆದ್ರೆ ಸಾಕೇ, ಪಾದಚಾರಿ ಮಾರ್ಗವೂ ಬೇಕಲ್ಲವೇ. ಹೌದು, ಸುಸಜ್ಜಿತ ರಸ್ತೆ ಜೊತೆಗೆ ಸುರಕ್ಷಿತ ಪಾದಚಾರಿ ಮಾರ್ಗವೂ ಅತ್ಯವಶ್ಯಕ. ಸುರಕ್ಷತಾ ಪಾದಚಾರಿ ಮಾರ್ಗಗಳಿಲ್ಲದಿದ್ದರೆ ಪಾದಚಾರಿಗಳು ಸಂಚರಿಸುವುದಾದರೂ ಹೇಗೆ ಹೇಳಿ? ಅದೆಷ್ಟೋ ಪ್ರದೇಶಗಳಲ್ಲಿ ಸೂಕ್ತ ಪಾದಚಾರಿ ಮಾರ್ಗಗಳಿಲ್ಲದೇ ಸಾವು - ನೋವು ಸಂಭವಿಸಿರುವುದು ದುರಂತವೇ ಸರಿ.
ಸಿಲಿಕಾನ್ ಸಿಟಿಗೆ ದೇಶದಲ್ಲೇ ಅತಿ ಹೆಚ್ಚು ಪಾದಚಾರಿಗಳ ಸಾವು ಸಂಭವಿಸುತ್ತಿರುವ ನಗರ ಎಂಬ ಕುಖ್ಯಾತಿ ಇದೆ. 2018 ರಲ್ಲಿ 276 ಮಂದಿ, 2019 ರಲ್ಲಿ 272, 2020 ರಲ್ಲಿ 124 ಪಾದಚಾರಿಗಳು ಸಾವನ್ನಪ್ಪಿದ್ದಾರೆ. ಹಾಗಾಗಿ ಪಾದಚಾರಿ ಮಾರ್ಗ ನಿರ್ಮಾಣಕ್ಕೆ 15ನೇ ಹಣಕಾಸು ಯೋಜನೆಯಡಿ ಅನುದಾನ ಮೀಸಲಿಟ್ಟಿದ್ದು, ಕೆಲ ಯೋಜನೆಗಳ ಪ್ರಸ್ತಾವನೆ ನೀಡಲಾಗಿದೆಯಂತೆ.
ಇನ್ನೂ ಬೆಳಗಾವಿಯಲ್ಲಿ ಕಳೆದ ವರ್ಷ 85ಕ್ಕೂ ಅಧಿಕ ಪಾದಚಾರಿಗಳು ಅಪಘಾತಕ್ಕೀಡಾದರೆ 25 ಮಂದಿ ಕೊನೆಯುಸಿರೆಳೆದಿದ್ದಾರೆ. ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದ ಪ್ರಮುಖ ರಸ್ತೆ ಬದಿಯಲ್ಲಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗುತ್ತಿದ್ದು, ಕಾಮಗಾರಿಗಳು ಶೀಘ್ರವೇ ಪೂರ್ಣಗೊಳ್ಳಬೇಕಿದೆ. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ಮೈಸೂರಿನಲ್ಲಿ ಕಳೆದ ವರ್ಷ 115 ಅಪಘಾತ ಪ್ರಕರಣಗಳಲ್ಲಿ 633 ಮಂದಿ ಗಾಯಗೊಂಡಿದ್ದರೆ, 122 ಮಂದಿ ಕೊನೆಯುಸಿರೆಳೆದಿದ್ದಾರೆ.
ಓದಿ: ಸುಸಜ್ಜಿತ ರಸ್ತೆ ಜೊತೆಗೆ ಬೇಕಿದೆ ಸುರಕ್ಷಿತ ಪಾದಚಾರಿ ಮಾರ್ಗ; ಅಪಘಾತಗಳ ನಿಯಂತ್ರಣಕ್ಕೆ ಇದೊಂದೇ ದಾರಿ
ಗಣಿನಾಡು ಬಳ್ಳಾರಿಯಲ್ಲಿ ಈ ಮೊದಲು 350ಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದು, ಸದ್ಯ ಈ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಝೀಬ್ರಾ ಕ್ರಾಸಿಂಗ್ ಕಡೆಗೆ ಗಮನ ಹರಿಸಿದ್ದೇ ಅಪಘಾತ ಪ್ರಕರಣಗಳ ನಿಯಂತ್ರಣಕ್ಕೆ ಕಾರಣ ಅಂತಾ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಅಫಘಾತಗಳು ಹೆಚ್ಚಿರುವ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ನಿರ್ಮಿಸುವುದರಿಂದ ಮಾತ್ರ ಅಪಘಾತಗಳನ್ನು ತಡೆಯಬಹುದು. ಅಪಘಾತಗಳ ನಿಯಂತ್ರಣಕ್ಕೆ ಪಾದಚಾರಿ ಮಾರ್ಗ ನಿರ್ಮಾಣವೊಂದೇ ಪರಿಹಾರ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.