ಬೆಂಗಳೂರು: ಲೋಕಸಭಾ ಚುನಾವಣೆ ಒಳಗಡೆ ನಮ್ಮ ಸಮಾಜಕ್ಕೆ ನ್ಯಾಯ ಕೊಡಬೇಕು ಇಲ್ಲ ಅಂದ್ರೆ ಶಕ್ತಿ ಪ್ರದರ್ಶನ ಮಾಡಬೇಕಾಗುತ್ತೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಟೌನ್ ಹಾಲ್ ಸಮೀಪ ಇರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕಳೆದ ಸರ್ಕಾರ 2d ಹೊಸ ಮೀಸಲಾತಿ ಕೊಟ್ಟಿತು, ಆದರೆ ಮೀಸಲಾತಿ ಇದುವರೆಗೂ ಅನುಷ್ಠಾನಕ್ಕೆ ಬಂದಿಲ್ಲ. ಕಾರಣ ನೀತಿ ಸಂಹಿತೆ ಹೊಸ ಸರ್ಕಾರ ಬಂತು. ಈಗ ಸರ್ಕಾರ ಬಂದ ನಂತರ ನಮ್ಮ ಎಲ್ಲಾ ಶಾಸಕರು ಸಹ ಸಿಎಂ ಭೇಟಿ ಮಾಡಿ ಮನವಿ ಮಾಡಿದ್ದೇವೆ. ಬಜೆಟ್ ಅಧಿವೇಶನಕ್ಕೂ ಮುನ್ನವೇ ಸಭೆ ಕರೆಯುತ್ತೇವೆ ಎಂದಿದ್ದರು. ಬಜೆಟ್ ಮುಗಿದು ಮೂರು ತಿಂಗಳಾದರೂ ಅದರ ಬಗ್ಗೆ ಪ್ರತಿಕ್ರಿಯಿಸಿಲ್ಲ. ಮತ್ತೊಮ್ಮೆ ಸರ್ಕಾರದ ಗಮನಕ್ಕೆ ತರುತ್ತೇವೆ. ಮಹಾರಾಷ್ಟ್ರ ಕರ್ನಾಟಕ ಗಡಿ ಭಾಗದ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ಶುರು ಮಾಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಈ ಹೋರಾಟ ನಡೆಯುತ್ತಿದೆ. ಸರ್ಕಾರದ ಮೇಲೂ ಒತ್ತಡ ಹಾಕ್ತಿದ್ದೇವೆ ಎಂದರು.
ಕಾಂಗ್ರೆಸ್ ಸರ್ಕಾರದ ಬಂದ ಮೇಲೆ ಸ್ವಾಮೀಜಿ ಸೈಲೆಂಟ್ ಆಗಿದ್ದಾರೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರ ಈಗ ಟೇಕಾಫ್ ಆಗ್ತಿದೆ. ಹಿಂದಿನ ಸರ್ಕಾರಕ್ಕೆ ನಾವು ಐದು ವರ್ಷ ಟೈಂ ಕೊಟ್ಟಿದ್ದೆವು. ಹಿಂದಿನ ಸರ್ಕಾರ ಯಾವಾಗ ಕೊಟ್ಟ ಮಾತು ತಪ್ಪಿತೋ ಆಗ ನಾವು ಉಗ್ರ ಹೋರಾಟಕ್ಕೆ ಇಳಿದೆವು. ಈ ಸರ್ಕಾರಕ್ಕೂ ನಾವು ಮನವಿ ಮಾಡಿದ್ದೇವೆ. ಮೂರು ತಿಂಗಳಾಗಿದೆ, ಏನು ಆಗಿಲ್ಲ. ಹೋರಾಟ ಸಹ ಶುರು ಮಾಡಿದ್ದೇವೆ. ಶಾಂತಿಯುತ ಹೋರಾಟ ಶುರು ಮಾಡಿದ್ದೇವೆ. ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಮುಂದಿನ ಲೋಕಸಭಾ ಚುನಾವಣೆ ಮುನ್ನವೇ ನಮ್ಮ ಸಮಾಜಕ್ಕೆ 2A ಮೀಸಲಾತಿ ಕೊಡಬೇಕು. ಎಲ್ಲ ಲಿಂಗಾಯತರಿಗೂ ಕೇಂದ್ರದ ಒಬಿಸಿ ಮೀಸಲು ಶಿಫಾರಸು ರಾಜ್ಯ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.
ಲಂಡನ್‌ನಲ್ಲಿನ ಚೆನ್ನಮ್ಮ ಖಡ್ಗ ವಾಪಸ್ ತರಬೇಕು: ಸಿಎಂ ಸಿದ್ದರಾಮಯ್ಯ ಬಳಿ ಕಿತ್ತೂರು ರಾಣಿ ಚೆನ್ನಮ್ಮ ಬಗ್ಗೆ ಮೂರು ಮನವಿಗಳನ್ನು ಮಾಡುತ್ತಿದ್ದೇನೆ. ಪುಣೆಯಲ್ಲಿ ಚೆನ್ನಮ್ಮ ಅವರ 32 ಸಾವಿರ ದಾಖಲೆಗಳಿವೆ. ಲಂಡನ್ ಮ್ಯೂಸಿಯಂನಲ್ಲಿ ಚೆನ್ನಮ್ಮ ಖಡ್ಗ ಇದೆ, ಅದನ್ನು ವಾಪಸ್ ನಮ್ಮ ರಾಜ್ಯಕ್ಕೆ ತರಬೇಕು. ಶಿವಾಜಿಯ ವ್ಯಾಘ್ರ ನಖ್ ಹೇಗೆ ತಂದರೋ ಹಾಗೇ ಚೆನ್ನಮ್ಮ ಖಡ್ಗ ಸಹ ವಾಪಸ್ ತರಬೇಕು ಎಂದು ಆಗ್ರಹಿಸಿದರು.
ಚೆನ್ನಮ್ಮ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಆಗಬೇಕಿದೆ. ಆದರೆ ಲೋಕಸಭೆಯಲ್ಲಿ ಜಾನ್ಸಿ ರಾಣಿ ಲಕ್ಷ್ಮೀಬಾಯಿ ಮೊದಲ ಸ್ವಾತಂತ್ರ ಹೋರಾಟಗಾರ್ತಿ ಎಂದು ತಪ್ಪಾಗಿ ಆಗಿದೆ. ಜಾನ್ಸಿ ರಾಣಿ ಲಕ್ಷ್ಮೀಬಾಯಿಗಿಂತ 32 ವರ್ಷ ಹಿಂದೆಯೇ ಕರ್ನಾಟಕದಲ್ಲಿ ರಾಣಿ ಚೆನ್ನಮ್ಮ ಸ್ವಾತಂತ್ರಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಕಿತ್ತೂರು ಗ್ರಾಮವನ್ನು 12D ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂಬ ಶಾಮನೂರು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ವಿಚಾರ ನಮ್ಮ ಗಮನಕ್ಕೂ ಬಂದಿದೆ. ಧರ್ಮ ಗುರುಗಳು ಆಡಳಿತ ಯಂತ್ರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಸುಮ್ಮನಿದ್ದೇವೆ. ಸಮಾಜದ ಮುಖಂಡರು ಧ್ವನಿ ಎತ್ತಿದ ಮೇಲೆ ಅದನ್ನು ಸರಿಪಡಿಸುವ ಕೆಲಸ ಆಗಬೇಕು. ಮುಖ್ಯಮಂತ್ರಿಗಳು ಮಾಡಲಿ ಎಂದು ಸಲಹೆ ನೀಡಿದ್ದೇನೆ. ಶಾಮನೂರವರು ಸಹ ಸಿಎಂ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ. ಅವರು ಏನು ಮಾತನಾಡಿದ್ದಾರೆ ಗೊತ್ತಿಲ್ಲ ಎಂದರು.
ಇದನ್ನೂ ಓದಿ : 2ಎ ಮೀಸಲಾತಿ ಹೋರಾಟ: ಹುಬ್ಬಳ್ಳಿಯಲ್ಲಿ ಹೆದ್ದಾರಿ ತಡೆ ನಡೆಸಿ ಇಷ್ಟಲಿಂಗ ಪೂಜೆ