ಬೆಂಗಳೂರು: ರಾಜ್ಯ ಸರ್ಕಾರದ ದೊಡ್ಡ ದೊಡ್ಡ ಹಗರಣಗಳ ವಿಚಾರವನ್ನು ನಾವೇ ಸವಿಸ್ತಾರವಾಗಿ ಬಿಚ್ಚಿಟ್ಟಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ಬೆಡ್ ಹಗರಣ, ಕೋಟ್ಯಂತರ ರೂಪಾಯಿ ದಲಿತರ, ರೈತರ ಮತ್ತು ಮಠಮಾನ್ಯಗಳ ದುಡ್ಡನ್ನು ಕಮಿಷನ್ ಹೊಡೆದು ಈಗ ಕಾಂಗ್ರೆಸ್ ಮೂತಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು, ಕೇವಲ 40 ರಿಂದ 45 ದಿನ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರಲಿದೆ, ಬೇಗ ಟೆಂಟ್ ಪ್ಯಾಕ್ ಮಾಡಿಕೊಂಡು ವಿಧಾನಸೌಧವನ್ನು ಡೆಟಾಲ್ ಹಾಕಿ ಕ್ಲೀನ್ ಮಾಡಿ. ನಾನೂ ಗಂಜಲ ತಂದು ವಿಧಾನಸೌಧವನ್ನು ಕ್ಲೀನ್ ಮಾಡುತ್ತೇನೆ ಎಂದು ಡಿಕೆಶಿ ಹೇಳಿದರು. ನಮ್ಮ ಪ್ರಜಾಧ್ವನಿ ಯಾತ್ರೆಯಿಂದ ಜನರ ಧ್ವನಿಯನ್ನು ತಿಳಿದುಕೊಂಡು ಪ್ರಜೆಗಳಿಗೆ ನಮ್ಮದೇ ಆದಂತಹ ಧ್ವನಿಯನ್ನು ಕೊಡಬೇಕು ಎಂದು ‘200 ಯುನಿಟ್ ವಿದ್ಯುತ್ ಉಚಿತ, 2 ಸಾವಿರ ರೂಪಾಯಿ ಖಚಿತ’ ಎಂದು ಘೋಷಣೆ ಮಾಡಿದ್ದೇವೆ. ಕಾಂಗ್ರೆಸ್ ಅವರು ಜನರ ಹೃದಯ ಗೆಲ್ಲುವ ಕಾರ್ಯಕ್ರಮವನ್ನು ನೀಡುತ್ತಿದ್ದಾರಲ್ಲ ಎಂದು ಬಿಜೆಪಿಗರಿಗೆ ತಲೆ ಕೆಟ್ಟು ಹೋಗಿದೆ. ಅದಕ್ಕಾಗಿ ಈ ಯೋಜನೆಗಳನ್ನು ಜಾರಿಗೆ ತಂದರೆ ಆರ್ಥಿಕತೆ ದಿವಾಳಿಯಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಖಾಸಗಿ ಸಂಸ್ಥೆಗಳ ಚುನಾವಣೆ ಸರ್ವೆಯಲ್ಲಿ ಬಿಜೆಪಿಗೆ 60-70 ಸೀಟು ಬರುತ್ತದೆ, ಕಾಂಗ್ರೆಸ್ಗೆ 120ಕ್ಕೂ ಅಧಿಕ ಸೀಟ್ ಬರುತ್ತದೆ. ಆದರೆ ಅದು ನಿಜವೋ ಸುಳ್ಳೋ ಗೊತ್ತಿಲ್ಲ. ಅದನ್ನು ನಾವು ನಂಬುವುದಿಲ್ಲ ಎಂದು ಹೇಳಿದರು. ಬಿಜೆಪಿಯಲ್ಲಿ ಅಂತರಿಕ ಜಗಳವಿದೆ, ಯಡಿಯೂರಪ್ಪ-ಬೊಮ್ಮಾಯಿ ಅವರಿಗೆ ಜಗಳ. ಯತ್ನಾಳ್, ವಿಶ್ವನಾಥ್, ಯೋಗೇಶ್ವರ್ ಹೀಗೆ ಬೇರೆ ಬೇರೆ ಮಂತ್ರಿಗಳಿಗೆ ಒಳ ಜಗಳ ನಡೆಯುತ್ತಿದೆ. ಅದಕ್ಕಾಗಿ ಸಚಿವ ಸುಧಾಕರ್ ಅವರನ್ನು ಮುಂದೆ ಬಿಟ್ಟು ಕಾಂಗ್ರೆಸ್ ನಾಯಕರು 35 ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪ ಮಾಡಿಸಿದ್ದಾರೆ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.
ಡಾ.ಸುಧಾಕರ್ ವಿರುದ್ಧ ಕಿಡಿಕಾರಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್: ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕವಾಗಿ ಆನೆ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡ ಜನ, ಅಡಿಕೆ ಕದ್ದವರನ್ನು ನಾವೂ ನೀವೂ ಒಂದೇ ಅಂತ ಹೇಳೋದಕ್ಕೆ ಹೊರಟಿದ್ದಾರೆ. ಆರೋಗ್ಯ ಸಚಿವ ಡಾ.ಸುಧಾಕರ್ ಆರೋಪಗಳಿಗೆ ಹರಿಪ್ರಸಾದ್ ತಿರುಗೇಟು ನೀಡಿದರು.
ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಅಷ್ಟೊಂದು ಶಕ್ತಿ ಇದ್ದರೆ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳ ಕೈಯಲ್ಲಿ ತನಿಖೆ ಮಾಡಿಸಲಿ. ಆನೆ ಕದ್ದು ಸಾರ್ವಜನಿಕವಾಗಿ ಸಿಕ್ಕಿಹಾಕಿಕೊಂಡವರು ಅವರು. ಬಿಜೆಪಿಯಿಂದ ಪಕ್ಷದಲ್ಲಿ ಎಲ್ಲ ರವಿಗಳೇ ಇರೋದು. ಬಾಟಲ್ ರವಿ, ಫೈಟರ್ ರವಿ, ಸ್ಯಾಂಟ್ರೋ ರವಿ, ಕೋಟಿ ರವಿ. ಇವರಲ್ಲಿ ಬರೀ ರವಿಗಳದ್ದೇ ಕಾಟ ಆಗೋಗಿದೆ. ಗೃಹ ಸಚಿವರ ಕೈಯಲ್ಲೇ ಇರುವ ಐಪಿಎಸ್ ಅಧಿಕಾರಿಗಳು ಯಾಕೆ ಜೈಲಿಗೆ ಹೋಗ್ತಿದ್ದಾರೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಪದ ಬಳಕೆಯಲ್ಲಿ ಸಮಾಜವಾದದಿಂದ ಕೋಮುವಾದಕ್ಕೆ ಮತಾಂತರ ಆಗಿದ್ದಾರೆ. ಮಾಧುಸ್ವಾಮಿ ಆಗಾಗ ಸತ್ಯ ಹೇಳ್ತಾ ಇರ್ತಾರೆ. ಕಂಟಪೂರ್ತಿ ಭ್ರಷ್ಟಾಚಾರದಲ್ಲಿ ಇರೋರು ಹೇಗೆ ಕಾಂಗ್ರೆಸ್ ಅನ್ನು ಅಗ್ರೆಸಿವ್ ಆಗಿ ಫೇಸ್ ಮಾಡ್ತಾರೆ ಎಂದು ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಸವಾಲು ಹಾಕಿದರು.
ಇದನ್ನೂ ಓದಿ: ರಾಜಕೀಯ ಮಾಡುವುದಿದ್ರೆ ಮಂಡ್ಯದಲ್ಲೆ, ಮಂಡ್ಯ ಬಿಡುವ ಪ್ರಶ್ನೆಯೇ ಇಲ್ಲ: ಸುಮಲತಾ ಅಂಬರೀಶ್