ಬೆಂಗಳೂರು: ಯಾವುದೇ ರೌಡಿಗಳನ್ನು ನಾವು ಬಿಜೆಪಿಗೆ ಸೇರಿಸಿಕೊಂಡಿಲ್ಲ. ರೌಡಿಗಳಿಗೆ ಪ್ರೋತ್ಸಾಹ ಕೂಡ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ರೌಡಿಗಳ ಸಹವಾಸದಲ್ಲಿ ಬಿಜೆಪಿ ನಾಯಕರು ಇರುವ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಹೆಚ್ಚಿಗೆ ಮಾತನಾಡಲು ಹೋಗುವುದಿಲ್ಲ. ನಾವು ರೌಡಿಗಳನ್ನು ಪ್ರೋತ್ಸಾಹ ಮಾಡಲ್ಲ, ಅವರಿಗೆ ಯಾವುದೇ ಅವಕಾಶಗಳನ್ನು ಕೊಡುವುದಿಲ್ಲ. ಇದು ಬಹಳ ಸ್ಪಷ್ಟ, ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಇದನ್ನೂ ಓದಿ: ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ.. ರಾಜ್ಯದ ಪರ ಸಮರ್ಥ ವಾದ ಮಂಡನೆ: ಸಿಎಂ ಬೊಮ್ಮಾಯಿ
ಸುಪ್ರೀಂ ಕೋರ್ಟ್ನಲ್ಲಿ ಗಡಿ ವಿವಾದದ ವಿಚಾರಣೆ ಸಂಬಂಧ ಮಾತನಾಡುತ್ತಾ, ನಮ್ಮ ರಾಜ್ಯದ ನಿಲುವು ಬಹಳ ಸ್ಪಷ್ಟವಾಗಿದೆ. ಮಹಾರಾಷ್ಟ್ರದ ಅರ್ಜಿ ಮೆಂಟೇನೆಬಲ್ ಅಲ್ಲ ಅನ್ನೋದು ನಮ್ಮ ನಿಲುವು. ಇದನ್ನೇ ನಮ್ಮ ವಕೀಲರು ವಾದ ಮಾಡ್ತಾರೆ. ನಮ್ಮ ನಿಲುವು ಸಂವಿಧಾನಬದ್ಧವಾಗಿದೆ, ಕಾನೂನಾತ್ಮಕವಾಗಿದೆ. ಆ ಎಲ್ಲಾ ಅಂಶಗಳನ್ನು ನಮ್ಮ ವಕೀಲರು ವಾದ ಮಾಡುತ್ತಾರೆ ಎಂದು ಹೇಳಿದರು.
ಪ್ರತ್ಯೇಕ ಕಾಲೇಜು ತೆರೆಯುವ ಬಗ್ಗೆ ಚರ್ಚೆ ನಡೆದಿಲ್ಲ: ವಕ್ಫ್ ಬೋರ್ಡ್ನಿಂದ ಮುಸ್ಲಿಂ ಯುವತಿಯರಿಗೆ ಪ್ರತ್ಯೇಕ ಕಾಲೇಜು ತೆರೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಪ್ರತ್ಯೇಕ ಕಾಲೇಜು ತೆರೆಯುವ ಬಗ್ಗೆ ನಮ್ಮ ಸರ್ಕಾರದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಇದು ಸರ್ಕಾರದ ನಿಲುವು ಕೂಡ ಆಗಿಲ್ಲ. ಆ ರೀತಿಯಲ್ಲಿ ಏನಾದರೂ ಪ್ರಸ್ತಾವನೆ ಇದ್ದರೆ ವಕ್ಫ್ ಬೋರ್ಡ್ ಅಧ್ಯಕ್ಷರೇ ಬಂದು ನನ್ನ ಜೊತೆ ಚರ್ಚೆ ಮಾಡಲಿ ಎಂದರು.
ಇದನ್ನೂ ಓದಿ: ಮುಸ್ಲಿಂ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಕಾಲೇಜು ಸ್ಥಾಪನೆ ಉದ್ದೇಶ ಸರ್ಕಾರಕ್ಕೆ ಇಲ್ಲ: ನಾಗೇಶ್
ಇಂದು ವಿಧಾನಸೌಧದ ನಿರ್ಮಾತೃ, ಸ್ವಾತಂತ್ರ್ಯ ಹೋರಾಟಗಾರ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿ. ಅವರ ಆದರ್ಶವನ್ನು ನೆನಪು ಮಾಡಿಕೊಳ್ಳಬೇಕು. ಕರ್ನಾಟಕದ ಏಕೀಕರಣಕ್ಕೆ ಅಪ್ರತಿಮ ಕೊಡುಗೆ ನೀಡಿದ್ದಾರೆ. ಮೈಸೂರು ಒಡೆಯರ್ ರಾಜಮನೆತನದ ಪ್ರಭಾವದಿಂದ ನಾಡಿನ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ರು ಎಂದು ಕೊಂಡಾಡಿದರು.
ಇದನ್ನೂ ಓದಿ: ರಾಮನಗರದಲ್ಲಿ ಕೆಂಗಲ್ ಹನುಮಂತಯ್ಯ ಪ್ರತಿಮೆ ಅನಾವರಣ
ಬೆಂಗಳೂರು ಶಕ್ತಿ ಕೇಂದ್ರವಾಗಬೇಕೆಂದು ವಿಧಾನಸೌಧ ನಿರ್ಮಾಣ ಮಾಡಿದ್ರು. ಇಡೀ ಭಾರತದಲ್ಲೇ ಈ ತರಹದ ವಿಧಾನಸೌಧ ಎಲ್ಲೂ ಇಲ್ಲ. ಆದರೆ, ಅವರಿಗೆ ಇಲ್ಲಿ ಕುಳಿತು ಆಡಳಿತ ಮಾಡಲು ಸಾಧ್ಯವಾಗಿಲ್ಲ. ಕೇಂದ್ರದ ರೈಲ್ವೆ ಸಚಿವರಾಗಿ ಕೆಲಸ ಮಾಡಿ ಡಬಲ್ ಲೈನ್ ರೈಲ್ವೆ ಯೋಜನೆ ಜಾರಿಗೆ ತಂದಿದ್ದರು. ಜೊತೆಗೆ ಕರ್ನಾಟಕ ಏಕೀಕರಣದಲ್ಲಿ ಭಾಗಿಯಾಗಿದ್ದರು ಎಂದು ಹೇಳಿದರು. ಈ ವೇಳೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ವಿಧಾನಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ, ಕೆಂಗಲ್ ಹನುಮಂತಯ್ಯ ಕುಟುಂಬ ವರ್ಗದವರು ಉಪಸ್ಥಿತರಿದ್ದರು.