ಬೆಂಗಳೂರು: ರಾಮನಗರದ ಬಳಿ ರಾಜೀವ್ ಗಾಂಧಿ ವಿವಿ, ವೈದ್ಯಕೀಯ ಕಾಲೇಜು, ಆಡಳಿತ ಕಟ್ಟಡ ನಿರ್ಮಾಣದ ಬಗ್ಗೆ ಕುಮಾರ ಕೃಪ ಅತಿಥಿ ಗೃಹದಲ್ಲಿ ಸಚಿವ ಸುಧಾಕರ್, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಅಧಿಕಾರಿಗಳ ಸಭೆ ನಡೆಯಿತು.
ಸಭೆ ಬಳಿಕ ಮಾತನಾಡಿದ ಸಚಿವ ಸುಧಾಕರ್, ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಕಾಲೇಜು ಮಾಡಬೇಕು. ವಿಶ್ವವಿದ್ಯಾನಿಲಯವೇ ರಾಮನಗರದಲ್ಲಿ ಆಗಬೇಕು ಎಂದು 2007 ರಲ್ಲಿ ತೀರ್ಮಾನ ಆಗಿತ್ತು. 2019 ರಲ್ಲಿ ಟೆಂಡರ್ ಕೂಡಾ ಮಾಡಲಾಗಿತ್ತು. ಆದ್ರೆ ಸ್ಥಳೀಯ ಜಮೀನಿನ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರಿಂದ ಯೋಜನೆ ನಿಧಾನವಾಗಿತ್ತು. ಅದಕ್ಕೆ ಈಗ ಮತ್ತೆ ಜೀವ ಕೊಡಬೇಕು ಹಾಗೂ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು, ಆರೋಗ್ಯ ಸೇವೆ ಉತ್ತಮಗೊಳಿಸಲು ಸಿಎಂ ಸೂಚನೆ ನೀಡಿದ್ದಾರೆ. ಹೀಗಾಗಿ ಸ್ಥಳೀಯ ಮುಖಂಡರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ ಸಭೆ ನಡೆಸಲಾಗಿದೆ ಎಂದು ಹೇಳಿದರು.
ಶಂಕುಸ್ಥಾಪನೆ ಮಾಡುವ ಬಗ್ಗೆ ಅಧಿಕಾರಿಗಳು, ಮಾಜಿ ಸಚಿವ ರೇವಣ್ಣ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳ ಜೊತೆ ಸಮಗ್ರವಾಗಿ ಚರ್ಚೆ ಮಾಡಲಾಗಿದೆ. ನೆನೆಗುದಿಗೆ ಬಿದ್ದಿರುವ ಈ ಯೋಜನೆಯನ್ನು, ಮತ್ತೆ ಚುರುಕುಗೊಳಿಸಬೇಕು. 25 ವರ್ಷದ ಬೆಳ್ಳಿಹಬ್ಬ ಆಚರಿಸಿರುವ ರಾಜೀವ್ ಗಾಂಧಿ ವಿವಿಗೆ ಆಡಳಿತ ಕಟ್ಟಡ ಕೂಡಾ ಇಲ್ಲ. ಹೀಗಾಗಿ ತಡಮಾಡದೆ, ರಾಮನಗರದಲ್ಲಿ ಕಟ್ಟಡ ಪ್ರಾರಂಭ ಮಾಡಲು ಚಾಲನೆ ನೀಡಲಾಗುವುದು ಎಂದರು.
ಮಾಜಿ ಶಾಸಕ ಮುನಿರತ್ನಗೆ ಟಿಕೆಟ್ ಕೊಡುವ ಹಾಗೂ ಸುಪ್ರೀಂಕೋರ್ಟ್ನಲ್ಲಿ ಜಯ ವಿಚಾರವಾಗಿ ಸಚಿವ ಸುಧಾಕರ್ ಪ್ರತಿಕ್ರಿಯಿಸಿ, ಇವತ್ತು ಸುಪ್ರೀಂಕೋರ್ಟ್ನಲ್ಲಿ ಜಯವಾಗಿದೆ. ಬಿಜೆಪಿ ಕೊಟ್ಟ ಮಾತು ಎಂದು ತಪ್ಪುವುದಿಲ್ಲ ಅಂತ ನಾನು ಮೊದಲಿನಿಂದ ಹೇಳಿದ್ದೇನೆ. ಮುನಿರತ್ನ ಅವರಿಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ನೂರಕ್ಕೆ ನೂರು ಟಿಕೆಟ್ ಸಿಗುವ ವಿಶ್ವಾಸ ಇದೆ. ಇಂದು ಸಂಜೆ ಕೇಂದ್ರದ ನಾಯಕರು ಸಭೆ ಮಾಡಿ ಮುನಿರತ್ನ ಕೈ ಹಿಡಿಯುತ್ತಾರೆ ಅಂತ ವಿಶ್ವಾಸ ಇದೆ ಎಂದರು.
ರಾಜೀವ್ ಗಾಂಧಿ ವಿವಿ ಆಡಳಿತ ಭವನದ ನಿರ್ಮಾಣ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ.ಕುಮಾರಸ್ವಾಮಿ, ಈ ನಿರ್ಮಾಣ ಕಾರ್ಯ 2006-07 ರಲ್ಲಿ ಪ್ರಾರಂಭ ಆಗಬೇಕಿತ್ತು. ಆದರೆ 10 ವರ್ಷ ಆದರೂ ಹಲವು ಅಡೆತಡೆಗಳಿಂದ ಅಡಚಣೆ ಆಗಿತ್ತು. ನಾನು ಎರಡನೇ ಸಲ ಸಿಎಂ ಆದಮೇಲೆ ಅದರ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದೆ. ಈಗ ಬಿಜೆಪಿ ಸರ್ಕಾರದಲ್ಲೂ ನಾವು ಚಾಲನೆ ಕೊಟ್ಟಿದ್ದಕ್ಕೆ ಮುಂದುವರೆಸಲು ಹೇಳಿದೆ. ಹೀಗಾಗಿ ಸುಧಾಕರ್ ವೈಯಕ್ತಿಕವಾಗಿ ಆಸಕ್ತಿ ಕೊಟ್ಟು ಟೆಂಡರ್ ಮಾಡಿದ್ದಾರೆ. ಸದ್ಯಕ್ಕೆ ಹೆಚ್ಚು ಕಡಿಮೆ ಎಲ್ಲವೂ ಬಗೆಹರಿದಿದೆ. ಎಲ್ಲವೂ ಒಂದು ಹಂತಕ್ಕೆ ಬಂದಿದೆ. ಸದ್ಯದಲ್ಲೇ ಅಲ್ಲೊಂದು ಕಾರ್ಯಕ್ರಮ ಮಾಡಲಾಗುತ್ತೆ ಎಂದರು.