ಬೆಂಗಳೂರು: ಉದ್ಯಮಿ ಸಿದ್ಧಾರ್ಥ್ ಸಾವಿನಲ್ಲೂ ರಾಜಕೀಯ ಮಾಡುವುದನ್ನು ನಾವು ಖಂಡಿಸುತ್ತೇವೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿ, ರಾಜ್ಯದ ಹೆಸರಾಂತ ಕಾಫಿ ಉದ್ಯಮಿ ನಿಧನರಾಗಿದ್ದಾರೆ. ಅವರ ಕುಟುಂಬ ಸದಸ್ಯರಷ್ಟೇ ಅಲ್ಲ ನಮ್ಮ ನಾಡು, ದೇಶದ ಹಲವಾರು ಜನರನ್ನು ಬಿಟ್ಟು ಅಗಲಿದ್ದಾರೆ. ಮೂಡಿಗೆರೆ ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಇವತ್ತು ಪ್ರಪಂಚದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರ ಅಗಲಿಕೆ ಸಹಜವಾಗಿ ಎಲ್ಲರಿಗೂ ನೋವು ತಂದಿದೆ ಎಂದರು.
ಅಮೆರಿಕದ ಕಾಫ್ ಬಗ್ಸ್ ನಂತಹ ಕಂಪನಿಯ ಮುಂದೆ ಕಾಫಿ ಡೇ ತಲೆ ಎತ್ತಿ ನಿಂತಿತ್ತು. ಸುಮಾರು 50 ಸಾವಿರ ಜನರಿಗೆ ಉದ್ಯೋಗ ಅವಕಾಶ ನೀಡಿದಂತ ವ್ಯಕ್ತಿ ಸಿದ್ಧಾರ್ಥ್. ಇವರ ಸಾವಿಗೆ ಐ ಟಿ ಇಲಾಖೆಯು ಕಾರಣ ಎಂದು ಹಲವಾರು ಆರೋಪ ಮಾಡುತ್ತಿದ್ದಾರೆ. ಅವರ ಸಾವಿನಲ್ಲೂ ರಾಜಕೀಯ ಮಾಡಲು ಹೊರಟಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು ಎಂದು ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದರು.