ಬೆಂಗಳೂರು: ರಾಜ್ಯದಲ್ಲಿ ರಕ್ತದ ಅಭಾವವಿದೆ ಹೀಗಾಗಿ ಎನ್ಎಸ್ಯುಐ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕರೆಕೊಟ್ಟ ಹಿನ್ನೆಲೆ ನಗರದ ರೇಸ್ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಇಂದು ಎನ್ಎಸ್ಯುಐ ನಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕಳೆದೆರಡು ದಿನಗಳಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುತ್ತಿದ್ದು, ಎನ್ಎಸ್ಯುಐ ಘಟಕದ ನೂರಾರು ಸದಸ್ಯರು ರಕ್ತದಾನ ಮಾಡಿದರು. ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ರಾಜ್ಯದಲ್ಲಿ ರಕ್ತದ ಅಭಾವ ಇದೆ. ಹೀಗಾಗಿ ನೀವು ಇದ್ದಲ್ಲೇ ರಕ್ತದಾನ ಮಾಡಿ ಎಂದು ನಾನು ನಮ್ಮ ವಿಧ್ಯಾರ್ಥಿ ಘಟಕಕ್ಕೆ ಕರೆ ಕೊಟ್ಟಿದ್ದೆ. ಹಲವಾರು ಜಿಲ್ಲೆಗಳಲ್ಲಿ ನಮ್ಮ ವಿದ್ಯಾರ್ಥಿ ಘಟಕದ ಸದಸ್ಯರು ರಕ್ತದಾನ ಮಾಡಿದ್ದಾರೆ ಅವರಿಗೆ ಶುಭಾಶಯಗಳು ಎಂದರು. ಜೊತೆಗೆ, ಮುಂದಿನ ದಿನಗಳಲ್ಲಿ ಕೂಡ ರಕ್ತದಾನ ಇದೇ ರೀತಿ ನಡೆಯಲಿದೆ ಎಂದರು.
ಮೇ 3 ನೇ ತಾರೀಖಿನವರೆಗೂ ನಾವು ಧಮ್ಮು ಕಟ್ಟಿಕೊಡು ಇದ್ದು, ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ಕೊಡುತ್ತೇವೆ. ಇದರಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಆದೇ ರೀತಿ ಸರ್ಕಾರ ಕೂಡ ಅಗತ್ಯ ವಸ್ತುಗಳ ಹಂಚಿಕೆಯಲ್ಲಿ ಸರಕಾರ ತಾರತಮ್ಯ ಮಾಡದೇ ಪಾರದರ್ಶಕವಾಗಿರಬೇಕು ಅಷ್ಟೇ ಎಂದರು.
ವಲಸೆ ಕಾರ್ಮಿಕರನ್ನು ಕರೆಸಿಕೊಳ್ಳಿ: ಗುಜರಾತ್ ಸಿಎಂ ಅವರ ರಾಜ್ಯದ ವಲಸೆ ಕಾರ್ಮಿಕರನ್ನು ಕರೆಸಿಕೊಂಡ ರೀತಿಯಲ್ಲಿ ನಮ್ಮ ರಾಜ್ಯದಲ್ಲೂ ವಲಸೆ ಕಾರ್ಮಿಕರನ್ನು ಕರೆಸಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿ. ಗಡಿ ಪ್ರದೇಶದಲ್ಲಿ ವಲಸೆ ಕಾರ್ಮಿಕರು ಸಂಕಷ್ಟಕ್ಕೀಡಾಗಿರುವುದರ ಬಗ್ಗೆ ನಮಗೆ ತುಂಬಾ ದೂರುಗಳು ಬರುತ್ತಿವೆ. ಅವರನ್ನು ವಾಪಸ್ ಕರೆಸುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರು.