ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಪ್ರಾಣ ಕಳೆದು ಕೊಂಡವರಿಗೆ 30 ಲಕ್ಷ ರೂ. ಕೊಡುತ್ತೇವೆ ಎಂದು ಹೇಳಿದ್ದೆವು. ಅದಕ್ಕೆ ಬದ್ಧರಾಗಿದ್ದೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಪ್ರತಿಭಟನೆಗೆ ಕರೆ ನೀಡದೇ ಇರುವ ಸಂಘಟನೆ ಜೊತೆ ಸಚಿವರ ಸಭೆ!
ಸಾರಿಗೆ ನೌಕರರ ಪ್ರತಿಭಟನೆಯನ್ನ ಎಐಟಿಸಿಯು, ಸಿಐಟಿಯು, ಮಹಾಮಂಡಳಿ, ಭಾರತೀಯ ಮಜ್ದೂರ್ ಸಂಘಟನೆ ನೀಡಿಲ್ಲ. ಆದರೂ ಸಚಿವರು ಇವರ ಜೊತೆ ಸಭೆ ನಡೆಸಿದರು. ನಂತರ ಮಾತನಾಡಿದ ಅವರು, ಡ್ಯೂಟಿ ಟೈಮ್ನಲ್ಲಿ ಮೇಲಧಿಕಾರಿಗಳು ಕಿರುಕುಳ ನೀಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಪ್ರತಿಭಟನೆ ಮಾಡುವವರಿಗೆ ವಿನಂತಿ ಮಾಡಿದ ಸಚಿವ: ಸಾರಿಗೆಯಲ್ಲಿ ಸಂಚಾರ ಮಾಡುವವರು ಬಡವರು, ಮಧ್ಯಮ ವರ್ಗದ ಜನ. ಅವರಿಗೆ ತೊಂದರೆ ಆಗಬಾರದು. ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ನಮಗೆ ನೋಟಿಸ್ ನೀಡಬೇಕು. ನಿಗದಿತ ದಿನಗಳಲ್ಲಿ ಬೇಡಿಕೆ ಈಡೇರಿಸುವ ಕೆಲಸ ಮಾಡದಿದ್ರೆ ಪ್ರತಿಭಟನೆ ಮಾಡುತ್ತೇವೆ ಎಂದು ನೋಟಿಸ್ ನೀಡಬೇಕು. ಆ ನಂತರ ಆಗದಿದ್ದರೆ ಹೋರಾಟ ಮಾಡಲಿ ಎಂದರು.
ಪರಿಷತ್ ಕಲಾಪವಿದ್ದ ಕಾರಣ ನಾವು ಹೋಗುವುದಕ್ಕೆ ಆಗಿಲ್ಲ. ನಮ್ಮ ಅಧಿಕಾರಿಗಳಿಗೆ ಭೇಟಿ ಮಾಡಿ ಎಂದು ಹೇಳಿದ್ವಿ. ಇವತ್ತಿನ ಪ್ರತಿಭಟನೆಯಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆ ಆಗಿದೆ. ನಮ್ಮ ನಿಮ್ಮ ಸಂಬಂಧ ಇವತ್ತಿಗೆ ಕೊನೆ ಅಲ್ಲ, ಇನ್ನೂ ಇದೆ. ಇವತ್ತಿಗೆ ನಮ್ಮ ನಿಮ್ಮ ಸಂಬಂಧ ಹಳಸಿಲ್ಲ, ಮುಂದೆಯೂ ಇದೆ ಎಂದರು.
ನಾಲ್ಕು ಯೂನಿಯನ್ ಮುಖಂಡರು ಸಭೆಗೆ ಬನ್ನಿ ಒಟ್ಟಿಗೆ ಚರ್ಚೆ ಮಾಡೋಣ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ವಿ. ಅವರು ಯಾವುದನ್ನೂ ನಮ್ಮ ಗಮನಕ್ಕೆ ತಾರದೆ ಈ ಪ್ರತಿಭಟನೆ ಮಾಡಿದ್ದಾರೆ. ಇದ್ದಕ್ಕಿದ್ದಂತೆ ಪ್ರಾರಂಭ ಆದ ಈ ಪ್ರತಿಭಟನೆ ನಿಯಂತ್ರಣ ಕಷ್ಟ. ಇವತ್ತು ನನ್ನ ಎಲ್ಲ ಪ್ರವಾಸ ಬದಿಗಿಟ್ಟು ಇಲ್ಲೇ ಇರುತ್ತೇನೆ. ಬನ್ನಿ ಮಾತಾಡೋಣ ಎಂದರು.
ಇದನ್ನೂ ಓದಿ: ನಟಿ ಸಂಜನಾಗೆ ಜಾಮೀನು ಮಂಜೂರು
ಆಂಧ್ರಪ್ರದೇಶದಲ್ಲಿ ಕೂಡ ಅಧ್ಯಯನ ಮಾಡಲು ಒಂದು ತಂಡ ಕಳಿಸೋಣ. ಅಲ್ಲಿನ ಸಾಧಕ - ಬಾಧಕಗಳ ವಿಚಾರ ಮಾಡಬೇಕು. ನಿಮ್ಮ ಬೇಡಿಕೆಯನ್ನು ನಾವು ಸಹಾನುಭೂತಿಯಿಂದ ಆಲಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.
ಸಂಜೆಯವರೆಗೂ ಮತ್ತೊಂದು ಸಭೆ ಮಾಡುತ್ತೇವೆ. ನಿಮ್ಮ ಜೊತೆಗೆ ಸರ್ಕಾರ ಇದೆ. ನಿಮ್ಮ ಜೊತೆಗೆ ನಾನು ಇದ್ದೇನೆ. ಇವತ್ತು ಚರ್ಚೆ ಮಾಡುತ್ತೇನೆ. ನಾಳೆ ಕೂಡ ಚರ್ಚೆ ಮಾಡುವುದಕ್ಕೆ ಸಿದ್ಧ ಎಂದು ಹೇಳಿದರು.