ಬೆಂಗಳೂರು: ಕೊರೊನಾ ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಅಪರಾಧಗಳು ಹೆಚ್ಚಾಗುತ್ತಿವೆ. ಇಲ್ಲಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಚೆಗೆ ತೆಂಗಿನಕಾಯಿ ವ್ಯಾಪಾರಿಯನ್ನು ಅಪಹರಿಸಿದ ವರದಿ ಬೆನ್ನಲೇ ಈಗ ಇದೇ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಇಲ್ಲಿನ ಟಿ.ದಾಸರಹಳ್ಳಿಯ 41 ವರ್ಷದ ಅನಂತ್ ಕುಮಾರ್ ಅವರನ್ನು ಸಿನಿಮೀಯ ಶೈಲಿಯಲ್ಲಿ ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ವಾಟರ್ ಟ್ಯಾಂಕ್ ವಹಿವಾಟು ನಡೆಸುವ ಅನಂತ್ ಅವರು ಆ.3 ರಂದು ಸ್ನೇಹಿತನೊಂದಿಗೆ ಕಾರಿನಲ್ಲಿ ಮನೆಗೆ ಬರುವಾಗ ಬಿಳಿ ಬಣ್ಣದ ಕಾರಿನಲ್ಲಿ ಬಂದ ಆರೋಪಿಗಳು ಡ್ರ್ಯಾಗರ್ ತೋರಿಸಿ ಅಪಹರಿಸಿದ್ದಾರೆ.
ಅನಂತ್ ಅವರ ಸ್ನೇಹಿತ ಚೇತನ್ ಮೇಲೆ ಡ್ರ್ಯಾಗರ್ನಿಂದ ಹಲ್ಲೆ ಮಾಡಿದ್ದಾರೆ. ಇದರಲ್ಲಿ ಪಾಪು ಆಲಿಯಾಸ್ ಯೋಹಾನಾ ಸೇರಿದಂತೆ ಆರು ಮಂದಿ ಅಪಹರಣಕಾರರು ಅನಂತ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ನಿವೇಶನ ಇಲ್ಲವೇ ಹಣ ನೀಡುವಂತೆ ಕೊಲೆ ಬೆದರಿಕೆ: ಆಗಸ್ಟ್ 3ರಂದು ಪೀಣ್ಯ, ದಾಸರಹಳ್ಳಿ ಸೇರಿದಂತೆ ರಾತ್ರಿಯಿಡಿ ಕಾರಿನಲ್ಲಿ ಸುತ್ತಾಡಿಸಿ, ಹೆಸರುಘಟ್ಟದ ನಿರ್ಜನ ಪ್ರದೇಶ ಬಳಿ ಕಾರಿನಿಂದ ಕೆಳಗಿಳಿಸಿ ದೊಣ್ಣೆಯಿಂದ ಥಳಿಸಿದ್ದಾರೆ.
ಡ್ರ್ಯಾಗರ್ ನಿಂದ ಕೈ ಮೇಲೆ ಹಲ್ಲೆ ನಡೆಸಿದ್ದಾರೆ. ಅನಂತ್ ಅವರ ಚೊಕ್ಕಸಂದ್ರ ಬಳಿಯಿರುವ ನಿವೇಶನ ಇಲ್ಲವೇ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಹಣ ನೀಡುವುದಾಗಿ ಒಪ್ಪಿದ ನಂತರ ಆರೋಪಿಗಳು ನಗರದ ಕಡೆಗೆ ಹೊರಟಿದ್ದಾರೆ. ಪೀಣ್ಯ 8 ನೇ ಮೈಲಿ ಬಳಿ ಬರುತ್ತಿದ್ದಂತೆ ಮೂತ್ರ ವಿಸರ್ಜನೆ ನೆಪ ಹೇಳಿ, ಅನಂತ ತಪ್ಪಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಪಾಪು ಅಲಿಯಾಸ್ ಯೋಹಾನ್ ಎಂಬಾತನು ಹಲವು ವರ್ಷಗಳಿಂದ ಅನಂತ್ಗೆ ಪರಿಚಯವಿದ್ದು, ಹಣದ ಆಸೆಗಾಗಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.