ಬೆಂಗಳೂರು: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕುಡಿಯುವ ನೀರಿನ ಭವಣೆ ಹೆಚ್ಚುತ್ತಿದ್ದು,ಜನ-ಜಾನುವಾರುಗಳ ಜೊತೆಗೆ ಹನಿ ನೀರಿಗಾಗಿ ಪಕ್ಷಿಗಳು ಪರದಾಡುತ್ತಿವೆ.ಆಹಾರಕ್ಕಾಗಿ ಅಲೆದಾಡುತ್ತಿದ್ದ ಪಕ್ಷಿ ಸಂಕುಲ ಇದೀಗ ನೀರಿನ ಸೆಲೆಗಳನ್ನು ಜಾಲಾಡುತ್ತಿವೆ.
ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿ, ಸೀಬರ್ಡ್ ನೌಕಾ ನೆಲೆಯಲ್ಲಿ ಇದೇ ಮೊದಲ ಬಾರಿ ಕುಡಿಯುವ ನೀರಿನ ಅಭಾವ ಸೃಷ್ಠಿಯಾಗಿದ್ದು,ರಾಜ್ಯದ ಜನತೆಯಲ್ಲಿ ಆತಂಕ ಮೂಡಿಸಿದೆ. ಇದ್ರ ನಡುವೆ ಸಿಲಿಕಾನ್ ಸಿಟಿಯಲ್ಲಿ ಹಕ್ಕಿಗಳಿಗೂ ನೀರಿನ ಸಮಸ್ಯೆ ಶುರುವಾಗಿದೆ.
ನಗರದಲ್ಲಿ ಸಾಕಷ್ಟು ಕೆರೆಗಳಿದ್ದರೂ ಕೆರೆಗಳ ವ್ಯಾಪ್ತಿಯ ಹೊರಗೆ ನೀರಿನ ಸೆಲೆಗಳು ಕಣ್ಮರೆಯಾಗುತ್ತಿದೆ. ಪ್ರಾಣಿ ಪಕ್ಷಿ ಪ್ರೀಯರು ಮನೆಗಳ ಟೆರೇಸ್ ಮೇಲೆ ಸಣ್ಣಸಣ್ಣ ಮಣ್ಣಿನ ಕುಡಿಕೆಯಲ್ಲಿ ನೀರನ್ನಿಡುತ್ತಿದ್ದರೂ ಕೆಂಡದಂಥ ಬಿಸಿಲಿಗೆ ನೀರು ಆವಿಯಾಗುತ್ತಿದೆ.
ನಗರದ ಕಚೇರಿಗಳೂ ಸೇರಿದಂತೆ ಕಟ್ಟಡಗಳಲ್ಲಿ ಅಳವಡಿಸಿರುವ ಹವಾನಿಯಂತ್ರಿತ ಯಂತ್ರಗಳಿಂದ ತೊಟ್ಟಿಕ್ಕುವ ಹನಿ ಹನಿ ನೀರನ್ನೂ ಹೀರಿ ಹಕ್ಕಿಗಳು ದಾಹ ತೀರಿಸಿಕೊಳ್ಳುತ್ತಿವೆ.