ಬೆಂಗಳೂರು: ಅಧಿಕಾರ ದುರ್ಬಳಕೆ ಮಾಡಿಕೊಂಡು ವಕ್ಫ್ ಮಂಡಳಿಯಿಂದ ಹಣ ಮಂಜೂರು ಮಾಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ವಕ್ಫ್ ಮಂಡಳಿ ಸದಸ್ಯ ಎನ್.ಕೆ.ಮಹಮ್ಮದ್ ಶಫಿ ಸಾದಿ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಈ ಕುರಿತು ಬೆಂಗಳೂರು ನಗರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಯಾಜ್ ಅಹ್ಮದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಸರ್ಕಾರದ ಪರ ವಕೀಲರು ವಾದಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಫಿ ಸಾದಿ ಅವರಿಗೆ ಆ. 2ರಂದು ಶೋಕಾಸ್ ನೋಟಿಸ್ ಜಾರಿಗೊಳಿಸಿ 7 ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಶಾಫಿ ಸಾದಿ ಪರ ವಕೀಲರು ವಾದಿಸಿ, ಶಾಸನಾತ್ಮಕ ಕಾನೂನಿನಡಿ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಶಾಸನಾತ್ಮಕ ಕಾನೂನು ಅನುಸಾರವೇ ತನಿಖೆ ನಡೆಯಲಿದೆ. ವಿಚಾರಣೆಗೆ ಪರಿಗಣಿಸಲು ಅರ್ಜಿಯಲ್ಲಿ ಏನೂ ಉಳಿದಿಲ್ಲ. ಹಾಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು. ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲ ಶ್ರೀಧರಪ್ರಭು ತನಿಖೆಗೆ ಹಿಂಜರಿಯುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಓದಿ: ಜಮೀರ್ ನಿವಾಸದ ಮೇಲೆ ಐಟಿ ದಾಳಿ.. ನಾನು ಇಡಿ, ಐಟಿ ಆಫೀಸರ್ ಅಲ್ಲ: ಸಿಎಂ ಬೊಮ್ಮಾಯಿ
ವಾದ - ಪ್ರತಿವಾದ ಆಲಿಸಿದ ಪೀಠ, ಈ ಹಂತದಲ್ಲಿ ಅರ್ಜಿ ಇತ್ಯರ್ಥಪಡಿಸುವುದಿಲ್ಲ. ಆರೋಪ ಕೇಳಿ ಬಂದಿರುವ ಪ್ರತಿವಾದಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಶೋಕಾಸ್ ನೋಟಿಸ್ನ ಫಲಿತಾಂಶ ಏನಾಗಲಿದೆ ಎಂದು ಗಮನಿಸಬೇಕಾಗುತ್ತದೆ. ಅಲ್ಲದೆ ಶೋಕಾಸ್ ನೋಟಿಸ್ ಆಧರಿಸಿ ಕೈಗೊಂಡ ಕ್ರಮಗಳ ವಿವರ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಸೆ.14ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ :
ಸಾದಿಯಾ ಎಜುಕೇಷನಲ್ ಫೌಂಡೇಷನ್‌ನ ಪ್ರಧಾನ ಕಾರ್ಯದರ್ಶಿಯಾಗಿರುವ ರಾಜ್ಯ ವಕ್ಫ್ ಮಂಡಳಿಯ ಹಾಲಿ ಸದಸ್ಯ ಶಫಿ ಸಾದಿ ಅವರು ಫೌಂಡೇಷನ್ಗೆ ಸೇರಿರುವ ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಸಾದಿಯಾ ಮಸೀದಿ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ವಕ್ಫ್ ಮಂಡಳಿಯಿಂದ 15 ಲಕ್ಷ ರೂ. ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಅಲ್ಲದೇ ಮಸೀದಿಗೆ ಕಾಂಪೌಂಡ್ ಗೋಡೆ ಇದ್ದರೂ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಹಣ ಮಂಜೂರು ಮಾಡಿಸಿಕೊಳ್ಳುವ ಮೂಲಕ ಶಾಫಿ ಸಾದಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ವಕ್ಫ್ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿರುವ ಶಫಿ ಸಾದಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.