ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರ ಪತನವಾದ ಕೂಡಲೇ ಬಿ ಎಸ್ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈಗ ಕೇಂದ್ರದ ಬಿಜೆಪಿ ವರಿಷ್ಠರಿಂದ ಗ್ರೀನ್ ಸಿಗ್ನಲ್ಗಾಗಿ ಕಾದು ಕುಳಿತಿದ್ದಾರೆ ರಾಜ್ಯ ನಾಯಕರು.
ಇಂದು ಇಡೀ ದಿನ ರಾಜ್ಯ ಬಿಜೆಪಿಯ ಪ್ರಮುಖ ನಾಯಕರೊಂದಿಗೆ ತಮ್ಮ ನಿವಾಸದಲ್ಲೇ ಮಾತುಕತೆ ನಡೆಸಿದ ಬಿ ಎಸ್ ಯಡಿಯೂರಪ್ಪ, ತಮ್ಮ ಮುಂದಿನ ನಡೆಗಳ ಬಗ್ಗೆ ಯಾವ ಸ್ಪಷ್ಟ ನಿರ್ಧಾರವನ್ನೂ ಘೋಷಿಸಿಲ್ಲ. ಯಾಕಂದ್ರೆ, ಎಲ್ಲರೂ ಸಂಸದೀಯ ಮಂಡಳಿಯ ಸೂಚನೆಗಾಗಿ ಕಾಯುತ್ತಿದ್ದಾರೆ.
ಈ ಬಗ್ಗೆ ಸ್ಪಷ್ಟ ಪಡಿಸಿದ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ, ಸರ್ಕಾರ ರಚನೆಗೆ ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸೂಚನೆಗಾಗಿ ಕಾಯುತ್ತಿದ್ದೇವೆ. ಅಲ್ಲದೆ ಸ್ಪೀಕರ್ ಮುಂದೆ ಇರುವ ರಾಜೀನಾಮೆ ವಿಚಾರ ನಮಗೇನೂ ಸಮಸ್ಯೆ ಆಗೋದಿಲ್ಲ. ರಾಜ್ಯದಲ್ಲಿ ಯಾವುದೇ ಮುಂದಿನ ನಡೆ ತೆಗೆದುಕೊಳ್ಳಲು, ಶಾಸಕಾಂಗ ಸಭೆ ನಡೆಸಲು, ರಾಜ್ಯಪಾಲರನ್ನು ಭೇಟಿಯಾಗಲು ಎಲ್ಲದಕ್ಕೂ ಸಂಸದೀಯ ಮಂಡಳಿ ಸೂಚನೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಸದೀಯ ಮಂಡಳಿ ಸೂಚನೆ ಕೊಟ್ಟ ತಕ್ಷಣ ಮುಂದುವರೆಯುತ್ತೇವೆ ಎಂದು ಅವರು ತಿಳಿಸಿದರು.
ಇದೇ ವೇಳೆ ಅರವಿಂದ ಲಿಂಬಾವಳಿ ಮಾತನಾಡಿ, ರಾಜ್ಯ ಸರ್ಕಾರ ಪತನಗೊಂಡಿದೆ. ಕೇಂದ್ರದ ನಾಯಕರು ನಿನ್ನೆಯ ಪರಿಸ್ಥಿತಿ ಅವಲೋಕಿಸುವುದು ಸಾಧ್ಯವಾಗಿಲ್ಲ. ಅಧಿವೇಶನ ಹಿನ್ನೆಲೆಯಲ್ಲಿ ಒಟ್ಟಾರೆ ಪರಿಸ್ಥಿತಿ ಅವಲೋಕನಕ್ಕೆ ಕಾಲಾವಕಾಶ ಹಿಡಯುತ್ತಿದೆ. ಹಿರಿಯ ನಾಯಕರು ಚರ್ಚೆ ಮಾಡಿದ್ದೇವೆ. ಮುಂದಿನ ನಡೆಯ ಬಗ್ಗೆ ಸಂಸದೀಯ ಮಂಡಳಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.