ಬೆಂಗಳೂರು: ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಸಾಹೇಬ್ರಿಗೆ ಜಾಣ ಮರೆವು, ಅವರ ವಿಷ್ಯ ಬಂದಾಗ ಎಲ್ಲವನ್ನೂ ಮರೆತು ಬಿಡ್ತಾರೆ ಎಂದು ಸಚಿವ ಸೋಮಣ್ಣ ವ್ಯಂಗ್ಯವಾಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಜನ ಮತ ಹಾಕಿದರು. ಈ ಚುನಾವಣೆಯಲ್ಲಿಯೂ ಸಹ ಸಿಎಂ ಯಡಿಯೂರಪ್ಪ ಮುಂದುವರಿಯಬೇಕು ಅನ್ನೋದು ಜನರ ಇಚ್ಛೆ. ದೇವೇಗೌಡರು, ಕುಮಾರಸ್ವಾಮಿ ಸೇರಿದಂತೆ ಯಾರು ಏನೇ ಹೇಳಿದರೂ ಅದು ಗೌಣ ಎಂದರು.
ಇದೇ ವೇಳೆ ಅನರ್ಹರು ಶಾಸಕರು ಚುನಾವಣೆಯಲ್ಲಿ ಗೆದ್ದು ಬಂದರೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಿದ ಸೋಮಣ್ಣ ಅವರು, ದೇವೇಗೌಡರಿಗೆ 87 ವರ್ಷ ವಯಸ್ಸಾಗಿದೆ. ಸಿದ್ದಗಂಗಾ ಶ್ರೀಗಳ ಹಾಗೆ ಅವರು 100 ವರ್ಷ ಬದುಕಬೇಕು. ಅವರು ಈಗ ಆರಾಮಾಗಿ ಇರಬಹುದಿತ್ತು. ಆಶೀರ್ವಾದ ಮಾಡಿ ಅಂತ ಹೇಳಿದ್ದೆ, ಯಾಕೆ ಹೀಗೆ ಗೋಪಾಲಯ್ಯ ಅವರನ್ನು ಸೋಲಿಸಬೇಕು ಅಂತ ಇದ್ದಾರೋ ಗೊತ್ತಿಲ್ಲ. ದೇವೇಗೌಡರ ಮಾತಿಗೆ ಯಾವುದೇ ಅರ್ಥವಿಲ್ಲ. ಯಡಿಯೂರಪ್ಪ ಮಾತು ಕೊಟ್ಟ ಮೇಲೆ ಮುಗಿಯಿತು. ಅವರು ಸಚಿವರನ್ನಾಗಿ ಮಾಡೇ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.