ETV Bharat / state

ಶತ್ರು ರಾಷ್ಟ್ರದ ಪರ ಘೋಷಣೆ ಕೂಗುವವರನ್ನು ಅಂಡಮಾನ್​​ ಜೈಲಿಗೆ ಹಾಕ್ಬೇಕು: ಉಗ್ರಪ್ಪ ಕಿಡಿ - VS Ugrapp reaction about pro-Pakistan Slogan

ನಮ್ಮ ದೇಶದ ವಿರುದ್ಧ ಇರುವ ದೇಶಗಳ ಪರ ಜೈಕಾರ ಹಾಕಲು ಅವಕಾಶ ಇಲ್ಲ, ಅದು ತಪ್ಪು. ನಿನ್ನೆ ನಮ್ಮ ಶತ್ರು ರಾಷ್ಟ್ರದ ಪರ ಜಿಂದಾಬಾದ್ ಕೂಗಿರುವುದು ಅಕ್ಷಮ್ಯ ಅಪರಾಧ. ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿರುವುದು ಕ್ಷಮಿಸಲು ಸಾಧ್ಯವಿಲ್ಲ. ಹುಬ್ಬಳ್ಳಿ ಮತ್ತು ಬೆಂಗಳೂರು ಘಟನೆಗಳನ್ನು ಕಾಂಗ್ರೆಸ್ ಸಹಿಸಲ್ಲ. ರಾಜ್ಯ ಸರ್ಕಾರ ಇಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.

VS Ugrapp reaction about pro-Pakistan Slogan
ಪಾಕಿಸ್ತಾನ ಪರ ಘೋಷಣೆ ಬಗ್ಗೆ ವಿ.ಎಸ್​.ಉಗ್ರಪ್ಪ ಪ್ರತಿಕ್ರಿಯೆ
author img

By

Published : Feb 21, 2020, 4:59 PM IST

ಬೆಂಗಳೂರು: ನಾವೆಲ್ಲರೂ ಭಾರತೀಯರು. 135 ಕೋಟಿ ಭಾರತೀಯರು ಭಾರತವನ್ನು ಪ್ರೀತಿಸಬೇಕು. ನಮ್ಮನ್ನು ನಾವು ದೇಶಕ್ಕೆ ಸಮರ್ಪಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಯಾವುದೇ ಪ್ರಜೆ ದೇಶದ ವಿರುದ್ಧವಾಗಿ, ಸಂವಿಧಾನ ಆಶಯಗಳಿಗೆ ವಿರುದ್ಧವಾಗಿ ಮಾತನಾಡಬಾರದು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶದ ವಿರುದ್ಧ ಇರುವ ದೇಶಗಳ ಪರ ಜೈಕಾರ ಹಾಕಲು ಅವಕಾಶ ಇಲ್ಲ, ಅದು ತಪ್ಪು. ನಿನ್ನೆ ನಮ್ಮ ಶತ್ರು ರಾಷ್ಟ್ರದ ಪರ ಜಿಂದಾಬಾದ್ ಕೂಗಿರುವುದು ಅಕ್ಷಮ್ಯ ಅಪರಾಧ. ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿರುವುದು ಕ್ಷಮಿಸಲು ಸಾಧ್ಯವಿಲ್ಲ. ಹುಬ್ಬಳ್ಳಿ ಮತ್ತು ಬೆಂಗಳೂರು ಘಟನೆಗಳನ್ನು ಕಾಂಗ್ರೆಸ್ ಸಹಿಸಲ್ಲ. ರಾಜ್ಯ ಸರ್ಕಾರ ಇಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ

ವಿದ್ಯಾವಂತ ಯುವಕ ಮತ್ತು ಯುವತಿಯರು ಪಾಕಿಸ್ತಾನ ಪರವಾಗಿ ಘೋಷಣೆ ಕೂಗುವುದನ್ನು ಕಾಂಗ್ರೆಸ್ ಖಂಡಿಸುತ್ತದೆ. ಇಂತವರನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕುವ ಕೆಲಸ ಮಾಡಬೇಕು. ಅವರನ್ನು ಪರಪ್ಪನ ಅಗ್ರಹಾರ ಜೈಲಿಗಿಂತ ಅಂಡಮಾನ್ ಜೈಲಿಗೆ ಹಾಕುವುದು ಸೂಕ್ತ. ನಮ್ಮ ದೇಶದ ಬಗ್ಗೆ ನಮಗೆ ಹೆಮ್ಮೆ ಇರಬೇಕು. ನಿನ್ನೆ ಪಾಕಿಸ್ತಾನದ ಪರ ಘೋಷಣೆ ಕೂಗಿದ ಹುಡುಗಿ ಮಾತನಾಡಿದ ಧಾಟಿ ನೋಡಿದರೆ ಯೋಚನೆ ಮಾಡಿಯೇ ಮಾತನಾಡಿದಂತಿದೆ. ಪೊಲೀಸರು ತಕ್ಷಣ ಸ್ಪಂದಿಸಿ ಆಕೆಯನ್ನು ದಸ್ತಗಿರಿ ಮಾಡಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿರುವುದು ಸ್ವಾಗತಾರ್ಹ ಎಂದರು.

ಇಂದಿರಾ ಗಾಂಧಿಯವರು ಪಾಕಿಸ್ತಾನದಿಂದ ಬಾಂಗ್ಲಾಕ್ಕೆ ಸ್ವಾತಂತ್ರ್ಯ ಕೊಡಿಸದಿದ್ದರೆ ಎರಡೂ ಕಡೆ ಪಾಕಿಸ್ತಾನ ಇದ್ದಿದ್ದರೆ ನಮ್ಮ ದೇಶದ ಪರಿಸ್ಥಿತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದರು. ನಮಗೆ ನಮ್ಮ ದೇಶ ಮೊದಲು. ಶತ್ರು ರಾಷ್ಟ್ರಗಳ ಪರ ಘೋಷಣೆ ಕೂಗುವವರಿಗೆ ಭಾರತದಲ್ಲಿ ಸ್ಥಾನ ಇಲ್ಲ. ಈ ರೀತಿಯ ಹೇಳಿಕೆ ನೀಡುವವರ ಬಗ್ಗೆ ಮಾಹಿತಿ ಪಡೆಯಲು ಬೇಹುಗಾರಿಕೆ ಇಲಾಖೆ ಹೆಚ್ಚು ಬಲಿಷ್ಠಗೊಳ್ಳಬೇಕು. ಕಾಂಗ್ರೆಸ್ ಯಾವತ್ತೂ ಕಾಶ್ಮೀರದ ಪ್ರತ್ಯೇಕತೆಗೆ ಬೆಂಬಲ ಸೂಚಿಸಿಲ್ಲ. ಫ್ರೀ ಕಾಶ್ಮೀರ್ ಎಂದರೆ ಅಲ್ಲಿ ತಡೆ ಹಿಡಿದಿದ್ದ ಇಂಟರ್​​ನೆಟ್ ಮತ್ತು ಇತರ ಸೌಲಭ್ಯಗಳನ್ನು ನೀಡುವಂತೆ ಒತ್ತಾಯ ಮಾಡಿದ್ದು. ಬಿಜೆಪಿಯವರು ಈಗಲೂ ತಮ್ಮ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸುವುದಿಲ್ಲ. ರಾಷ್ಟ್ರದ ರಕ್ಷಣೆ ವಿಚಾರದಲ್ಲಿ ಕಾಂಗ್ರೆಸ್ ಯಾವತ್ತೂ ಆಟ ಆಡುವುದಿಲ್ಲ. ನಾವು ಬಿರಿಯಾನಿ ತಿನ್ನಲು ಹೋಗಿಲ್ಲ, ಜರತಾರಿ ಸೀರೆ ಕೊಡಲೂ ಹೋಗಿಲ್ಲ ಎಂದು ಪ್ರಧಾನಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.