ಬೆಂಗಳೂರು: ರಾಜ್ಯಾದ್ಯಂತ ವಿಧಾನಸಭೆ ಚುನಾವಣೆಗೆ ಸಾರ್ವತ್ರಿಕ ಮತದಾನ ನಡೆಯುತ್ತಿದೆ. ಕನ್ನಡ ಚಿತ್ರರಂಗದ ತಾರೆಗಳು ಕೂಡ ತಮ್ಮ ತಮ್ಮ ಸ್ವಗ್ರಾಮಗಳಿಗೆ ಬಂದು ಮತ ಚಲಾಯಿಸುತ್ತಿದ್ದಾರೆ. ಹಿರಿಯನಟ ಹಾಗು ರಾಜ್ಯಸಭೆ ಸದಸ್ಯ ಜಗ್ಗೇಶ್ ಕುಟುಂಬ ಸಮೇತರಾಗಿ ಬಂದು ಬೆಂಗಳೂರಿನ ಮಲ್ಲೇಶ್ವರಂನ ಎಂಇಎಸ್ ಕಾಲೇಜಿನಲ್ಲಿ ವೋಟ್ ಮಾಡಿದರು.
ಅಮೂಲ್ಯ ದಂಪತಿಯಿಂದ ವೋಟಿಂಗ್: ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ಆರ್.ಚಂದ್ರ ಮತ ಹಾಕಿದರು. ನಂತರ ಪ್ರತಿಕ್ರಿಯಿಸಿದ ಅಮೂಲ್ಯ, "ಎಲ್ಲರೂ ಅವರವರ ಮತಗಟ್ಟೆಗೆ ಬಂದು ಓಟ್ ಮಾಡಿ. ಮತದಾನ ನಮ್ಮ ಹಕ್ಕು. ಯಾವುದೇ ರಿತೀಯಿಂದಲೂ ಓಟ್ ಮಿಸ್ ಮಾಡಿಕೊಳ್ಳಬೇಡಿ. ಇದುವರೆಗೆ ನಾನು 5 ಬಾರಿ ವೋಟ್ ಮಾಡಿದ್ದೇನೆ" ಎಂದರು.
ಚಾರ್ಲಿ 777 ಹಾಗು ಲಕ್ಕಿ ಮ್ಯಾನ್ ಸಿನಿಮಾ ಖ್ಯಾತಿಯ ಸಂಗೀತ ಶೃಂಗೇರಿ ಎಂ.ಎಸ್.ಪಾಳ್ಯದ ಉರ್ದು ಸ್ಕೂಲ್‌ನಲ್ಲಿ ಹಕ್ಕು ಚಲಾಯಿಸಿದರು. ಓಟ್ ಮಾಡಿದ ಫೋಟೋ, ವಿಡಿಯೋ ಹಂಚಿಕೊಂಡು, "ನಾನಂತೂ ವೋಟ್ ಮಾಡಿದ್ದಾಯಿತು. ನೀವೂ ಹೋಗಿ ವೋಟ್ ಮಾಡಿ" ಎಂಬ ಸಂದೇಶ ನೀಡಿದರು.
ರಮೇಶ್ ಅರವಿಂದ್ ದಂಪತಿಯಿಂದ ಮತದಾನ: ಪತ್ನಿ ಅರ್ಚನಾ ಜೊತೆ ನಟ ರಮೇಶ್ ಅರವಿಂದ್ ಮತಗಟ್ಟೆಗೆ ಆಗಮಿಸಿ, ಬನಶಂಕರಿಯ BNM ಶಾಲೆಯ ಬೂತ್ ನಂ. 145 ರಲ್ಲಿ ಮತದಾನ ಮಾಡಿದರು. ದಂಪತಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ಉಮಾಶ್ರಿ ವೋಟಿಂಗ್: ಹಿರಿಯ ನಟಿ, ಮಾಜಿ ಶಾಸಕಿ ಉಮಾಶ್ರಿ ಮತ ಹಾಕಿದರು. ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರದ ರಬಕವಿಯ ಸರ್ಕಾರಿ ಉರ್ದು ಶಾಲೆಯಲ್ಲಿ ಹಕ್ಕು ಚಲಾಯಿಸಿದರು.
ಉಪೇಂದ್ರ ಮತದಾನ: ನಟ ಉಪೇಂದ್ರ ಕತ್ರಿಗುಪ್ಪೆಯ BTL ವಿದ್ಯಾವಾಣಿ ಶಾಲೆಯಲ್ಲಿ ಮತ ಚಲಾಯಿಸಿದರು. ಮತದಾನ ಮಾಡುವುದಕ್ಕೂ ಮೊದಲು ಮಾತನಾಡಿದ ಅವರು, ದೊಡ್ಡದಾಗಿ ಕರ್ನಾಟಕ ಭವಿಷ್ಯ, ದೇಶದ ಭವಿಷ್ಯ ಅಂತೆಲ್ಲ ಹೇಳುವ ಬದಲು ನಮ್ಮ ಭವಿಷ್ಯ, ನಮ್ಮ ಮಕ್ಕಳ ಭವಿಷ್ಯ, ಎಲ್ಲರ ಭವಿಷ್ಯ ಮುಖ್ಯ. ಪ್ರಜಾಪ್ರಭುತ್ವದ ಅತಿ ಮುಖ್ಯವಾದ ದಿನ. ಎಲ್ಲರೂ ಬಂದು ವೋಟ್ ಮಾಡಿ ಎಂದರು.
ಗಣೇಶ್ ದಂಪತಿಯಿಂದ ಓಟಿಂಗ್: ರಾಜರಾಜೇಶ್ವರಿ ನಗರದ ಮತಗಟ್ಟೆಗೆ ಆಗಮಿಸಿದ ನಟ ಗಣೇಶ್ ದಂಪತಿ ಮತ ಚಲಾಯಿಸಿದರು.
ನಟ ಚಂದನ್ ಶೆಟ್ಟಿಯಿಂದ ಮತದಾನ: ನಟ ಹಾಗು ಗಾಯಕ ಚಂದನ್ ಶೆಟ್ಟಿ ನಾಗರಬಾವಿಯಲ್ಲಿ ಓಟಿಂಗ್ ಮಾಡಿದರು.
ಕುಟುಂಬ ಸಮೇತ ನಟ ಶರಣ್ರಿಂದ ಮತದಾನ: ನಾಗರಭಾವಿ ಕೆ.ಎಲ್.ಇ ಕಾಲೇಜ್ಗೆ ಫ್ಯಾಮಿಲಿ ಸಮೇತ ಆಗಮಿಸಿದ ನಟ ಶರಣ್ ಕುಟುಂಬ ಮತದಾನ ಮಾಡಿದರು. ನಂತರ ಮಾತನಾಡಿ, ಯುವ ಪೀಳಿಗೆ ಹೆಚ್ಚಾಗಿ ಬಂದು ಮತದಾನ ಮಾಡಿ. ಮೊದಲು ಓಟಿಂಗ್ ಮಾಡುವವರು ಯಾರು ಇಂಥ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಯುವ ಮತದಾರರಿಗೆ ಕಿವಿ ಮಾತು ಹೇಳಿದರು.
ಹಕ್ಕು ಚಲಾಯಿಸಿದ ನಿರ್ದೇಶಕ ಎಸ್ ನಾರಾಯಣ್ ದಂಪತಿ : ನಾಗರಭಾವಿಯ ಸೋಫಿಯಾ ಸ್ಕೂಲ್‌ನಲ್ಲಿ ಹಿರಿಯ ನಟ ಹಾಗು ನಿರ್ದೇಶಕ ಎಸ್ ನಾರಾಯಣ್ ದಂಪತಿ ಸಮೇತ ಬಂದು ಮತದಾನ ಮಾಡಿದರು. ಓಟಿಂಗ್ ಮಾಡಿದ ಬಳಿಕ ಎಸ್ ನಾರಾಯಣ್ ಪ್ರತಿಯೊಬ್ಬರು ಬಂದು ತಮ್ಮ ಮತವನ್ನು ಚಲಾಯಿಸಿ ಎಂದರು.
ತಂದೆ ಜೊತೆ ಬಂದು ನಟ ಶ್ರೀಮುರಳಿ ಮತದಾನ: ಉಗ್ರಂ ಖ್ಯಾತಿಯ ನಟ ಶ್ರೀಮುರಳಿ ತಂದೆ ಚಿನ್ನೇಗೌಡ ಜೊತೆ ಬಂದು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ತಮ್ಮ ಮತ ಹಾಕಿದರು. ನಂತರ ಪ್ರತಿಯೊಬ್ಬರೂ ಬಂದು ಮತವನ್ನು ಚಲಾಯಿಸಿ. ಕಳೆದ ಬಾರಿ ಚುನಾವಣೆಗಿಂತ ಈ ವರ್ಷ ಓಟಿಂಗ್ ಪರ್ಸೆಂಟೈಜ್ ಜಾಸ್ತಿ ಆಗಿರೋದು ಖುಷಿಯ ವಿಷಯ ಎಂದು ತಿಳಿಸಿದರು.
ನಟ ಅಜಯ್ ರಾವ್ರಿಂದಲೂ ಮತದಾನ: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಯೋಗ ಕೇಂದ್ರದಲ್ಲಿ ನಟ ಅಜಯ್ ರಾವ್ ಮತದಾನ ಮಾಡಿದರು. ತಾಯಿ ಜೊತೆ ಆಗಮಿಸಿದ ಅಜಯ್ ರಾವ್ ಮತಗಟ್ಟೆ ನಂ.187ರಲ್ಲಿ ಹಕ್ಕು ಚಲಾಯಿಸಿದರು. ಇನ್ನು ನಟ ಪ್ರೇಮ್ ದಂಪತಿ ಮತ ಚಲಾಯಿಸಿದ್ದು, ಯಾರೆಲ್ಲ ದಯವಿಟ್ಟು ಬಂದು ವೋಟ್ ಮಾಡಿ ಎಂದು ಮನವಿ ಮಾಡಿದರು.
![vote](https://etvbharatimages.akamaized.net/etvbharat/prod-images/18465424_thumbacter.jpg)
ನಟ ರಕ್ಷಿತ್ ಶೆಟ್ಟಿಯಿಂದ ಓಟಿಂಗ್: ಉಡುಪಿಯಲ್ಲಿ ಕನ್ನಡ ನಟ ರಕ್ಷಿತ್ ಶೆಟ್ಟಿ ಮತದಾನ ಮಾಡಿದರು.
ಡಾಲಿ ಧನಂಜಯರಿಂದ ಮತದಾನ: ಬಹುಭಾಷ ನಟ ಡಾಲಿ ಧನಂಜಯ ಕುಟುಂಬ ಸಮೇತ ಬಂದು ಅರಸಿಕೆರೆಯ ಕಲ್ಲೇನಹಳ್ಳಿಯಲ್ಲಿ ಮತದಾನ ಮಾಡಿದರು.
ಉಡುಪಿಯಲ್ಲಿ ರಿಷಬ್ ಶೆಟ್ಟಿ ಮತದಾನ: ನಿರ್ದೇಶಕ, ನಟ ರಿಷಬ್ ಶೆಟ್ಟಿ ಉಡುಪಿಯ ಮತಗಟ್ಟೆಗೆ ಆಗಮಿಸಿದ್ದು ತಮ್ಮ ಹಕ್ಕನ್ನು ಚಲಾಯಿಸಿದರು.
ಇದನ್ನೂ ಓದಿ: ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬಂದು ಮೊದಲ ವೋಟ್ ಮಾಡಿದ 'ಕೆಂಡಸಂಪಿಗೆ' ನಟ ವಿಕ್ಕಿ