ಬೆಂಗಳೂರು: ಮತಗಟ್ಟೆ ಅಧಿಕಾರಿ ಸೋಗಿನಲ್ಲಿ ಮತದಾರರ ವೈಯಕಿಕ್ತ ಮಾಹಿತಿ ಸಂಗ್ರಹಿಸುತ್ತಿರುವ ಆರೋಪ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಮಲ್ಲೇಶ್ವರದಲ್ಲಿರುವ ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೇಲೆ ನಗರ ಕೇಂದ್ರ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ.
ಮತಕಟ್ಟೆ ಅಧಿಕಾರಿ ಸೋಗಿನಲ್ಲಿ ಮತದಾರರಿಂದ ವೈಯಕ್ತಿಕ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿ ಗುರುವಾರ ದೂರು ನೀಡಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಿಲುಮೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದು, ಸಂಸ್ಥೆಯ ನಿರ್ದೇಶಕರಾಗಿರುವ ಕೃಷ್ಣಪ್ಪ ರವಿಕುಮಾರ್ಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಸಂಸ್ಥೆಯ ಬ್ಯೂಸಿನೆಸ್ ಹೆಡ್ ಆಗಿರುವ ಸುಧಾಕರ್, ಕೇಸ್ ವರ್ಕರ್ ರಕ್ಷಿತ್, ನಕಲಿ ಮತಗಟ್ಟೆ ಅಧಿಕಾರಿಗಳಾಗಿದ್ದ ರೇಣುಕಾ ಪ್ರಸಾದ್ ಹಾಗೂ ಧರ್ಮೇಶ್ ಎಂಬುವರನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
ಮತ್ತೊಂದೆಡೆ ಕಬ್ಬನ್ ಪಾರ್ಕ್ ಎಸಿಪಿ ನಾರಾಯಣಸ್ವಾಮಿ ನೇತೃತ್ವದ ತಂಡ ಚಿಲುಮೆ ಕಚೇರಿ ಮೇಲೆ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸುತ್ತಿದೆ. ದಾಳಿ ವೇಳೆ ಯಾರನ್ನು ಒಳ-ಹೊರಗೆ ಬಿಟ್ಟಿಲ್ಲ. ವಿವಿಧ ಆಯಾಮಗಳಲ್ಲಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
(ಓದಿ: ಮತದಾರರ ಮಾಹಿತಿ ಕಳ್ಳತನ ಆರೋಪ: ಚಿಲುಮೆ ಸಂಸ್ಥೆಯ ಅನುಮತಿ ರದ್ದು ಮಾಡಿ ಎಫ್ಐಆರ್ ದಾಖಲಿಸಿದ ಬಿಬಿಎಂಪಿ)