ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಿ ಶೀಘ್ರ ವರದಿ ನೀಡುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಈಗಾಗಲೇ ಕಾಂಗ್ರೆಸ್ ಪಕ್ಷ ಚಿಲುಮೆ ಸಂಸ್ಥೆಯು ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಖಾಸಗಿ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಗಂಭೀರ ಆರೋಪ ಮಾಡಿದೆ. ಕೆಪಿಸಿಸಿ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸೆಪ್ಟೆಂಬರ್‌ನಲ್ಲಿ ನೀಡಿದ ದೂರಿನಲ್ಲಿ ದಾವಣಗೆರೆಯ ಸಮನ್ವಯ ಟ್ರಸ್ಟ್ ಚಿಲುಮೆ ಸಂಸ್ಥೆಯ ವಿರುದ್ಧ ಅಕ್ರಮದ ದೂರು ನೀಡಿ, ತನಿಖೆ ನಡೆಸುವಂತೆ ಕೋರಿತ್ತು. ನ.10ರಂದು ಮತ್ತೊಂದು ದೂರು ಸಲ್ಲಿಕೆಯಾಗಿದೆ. ಅದರಲ್ಲಿ ಖಾಸಗಿ ವ್ಯಕ್ತಿಯೊಬ್ಬ ಮಹದೇವಪುರ ಕ್ಷೇತ್ರದ ಬೂತ್ ಲೆವೆಲ್ ಆಫೀಸರ್ ಎಂಬ ಐಡಿ ಕಾರ್ಡ್ ಬಳಸಿರುವುದಾಗಿ ಆರೋಪಿಸಲಾಗಿದೆ.
ಇದನ್ನೂ ಓದಿ: ಮತದಾರರ ಸಮೀಕ್ಷೆ ಹೆಸರಿನಲ್ಲಿ ಖಾಸಗಿತನಕ್ಕೆ ಕನ್ನ ಆರೋಪ.. ನಗರ ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ದೂರು
ಚುನಾವಣಾ ನೋಂದಣಿ ಅಧಿಕಾರಿ ತಮ್ಮ ವರದಿಯಲ್ಲಿ, ಕಳೆದ ಜನವರಿ 29ರಂದು ಚಿಲುಮೆ ಸಂಸ್ಥೆಗೆ ಅನುಮತಿಯ ಮೇರೆಗೆ ಬೂತ್ ಲೆವೆಲ್ ಸಮನ್ವಯಾಧಿಕಾರಿಯ ಐಡಿ ಕಾರ್ಡ್ಗಳನ್ನು ನೀಡಲಾಗಿತ್ತು. ಸಂಸ್ಥೆಯು ಐಡಿ ಕಾರ್ಡ್ಗಳ ಪ್ರತಿಗಳನ್ನು ತೆಗೆದು ಅದರ ಮೇಲೆ ಬಿಎಲ್ಓ ಎಂದು ಬರೆದು, ಜತೆಗೆ ಜೂನ್ 9, 2022 ಎಂಬ ದಿನಾಂಕವನ್ನೂ ಉಲ್ಲೇಖಿಸಿದೆ ಎಂದು ತಿಳಿಸಿದ್ದಾರೆ.
ನ.15ರಂದು ವೈಟ್ ಫೀಲ್ಡ್ ಠಾಣೆಯಲ್ಲಿ ಅನುಮತಿ ಹಾಗೂ ಐಡಿ ಕಾರ್ಡ್ ದುರುಪಯೋಗ ಪಡಿಸಿರುವುದಾಗಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಸೂಕ್ಷ್ಮತೆ ಹಾಗೂ ಗಾಂಭೀರ್ಯತೆಯನ್ನು ಮನಗಂಡು, ಸಮಗ್ರ ತನಿಖೆ ನಡೆಸುವ ಅಗತ್ಯತೆ ಇದೆ. ಹೀಗಾಗಿ ವಿಸ್ತೃತ ತನಿಖೆ ನಡೆಸಿ ಆದಷ್ಟು ಬೇಗ ವರದಿ ನೀಡುವಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಮತದಾರರ ಮಾಹಿತಿ ಕಳ್ಳತನ ಆರೋಪ: ಚಿಲುಮೆ ಸಂಸ್ಥೆಯ ಅನುಮತಿ ರದ್ದು ಮಾಡಿ ಎಫ್ಐಆರ್ ದಾಖಲಿಸಿದ ಬಿಬಿಎಂಪಿ