ಬೆಂಗಳೂರು: ಮತದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿರುವ ಗಂಭೀರ ಆರೋಪ ಎದುರಿಸುತ್ತಿರುವ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಅವರನ್ನು ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಸಂಸ್ಥೆಯ ಉದ್ಯೋಗಿಗಳಾದ ರೇಣುಕಾಪ್ರಸಾದ್, ಧರ್ಮೇಶ್, ನಿರ್ದೇಶಕ ಕೆಂಪೇಗೌಡ, ಇ-ಪ್ರಕ್ಯೂರ್ಮೆಂಟ್ ವಿಭಾಗದ ಪ್ರಜ್ವಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ತಡರಾತ್ರಿ ರವಿಕುಮಾರ್ ಬಂಧನವಾಗಿದೆ.
ಇದನ್ನೂ ಓದಿ: ಮತದಾರರ ಗುರುತಿನ ಚೀಟಿ ದಾಖಲೆ ಕಳ್ಳತನ ಪ್ರಕರಣ.. ಸಿಎಂ ಬೊಮ್ಮಾಯಿಯೇ ಕಿಂಗ್ ಪಿನ್: ಸುರ್ಜೇವಾಲಾ
ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಚಿಲುಮೆ ಸಂಸ್ಥೆಯ ಹೆಸರು ಮುಖ್ಯವಾಗಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಲ್ಲೇಶ್ವರಂನಲ್ಲಿರುವ ಸಂಸ್ಥೆಯ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಪೊಲೀಸ್ ದಾಳಿಯ ಬಗ್ಗೆ ಸುಳಿವು ಪಡೆದಿದ್ದ ರವಿಕುಮಾರ್ ಹಾಗೂ ಕಂಪನಿಯ ಮತ್ತೋರ್ವ ಪ್ರಮುಖ ಲೋಕೇಶ್ ಎಂಬವರು ತಲೆಮರೆಸಿಕೊಂಡಿದ್ದರು.
ಇಬ್ಬರ ಪತ್ತೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಅವರು ವಾಸವಿದ್ದ ನೆಲಮಂಗಲದ ಟಿ.ಬೇಗೂರು ಸೇರಿ ಹಲವೆಡೆ ಪರಿಶೀಲನೆ ನಡೆಸಲಾಗಿತ್ತು. ತಲೆಮರೆಸಿಕೊಂಡ ಬಳಿಕ ತುಮಕೂರು, ಶಿರಸಿ ಭಾಗದಲ್ಲಿ ಓಡಾಡಿದ್ದ ರವಿಕುಮಾರ್ ತಡರಾತ್ರಿ ವಕೀಲರ ಭೇಟಿಗೆ ಬೆಂಗಳೂರಿಗೆ ಬಂದಾಗ ಲಾಲ್‌ಬಾಗ್ ಬಳಿ ಬಂಧಿಸಲಾಗಿದೆ ಎಂದು ಹಲಸೂರು ಗೇಟ್ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಸಹೋದರ ಕೆಂಪೇಗೌಡ ಬಂಧನ