ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಉಚ್ಚಾಟಿತ ಎಐಎಡಿಎಂಕೆ ಮುಖಂಡೆ ವಿ.ಕೆ.ಶಶಿಕಲಾ ನಟರಾಜ್ ಅವರಿಗೆ, ಈ ಬಾರಿಯೂ ಜೈಲಿನಿಂದ ಬಿಡುಗಡೆ ಭಾಗ್ಯವಿಲ್ಲ ಎಂದು ಪರಪ್ಪನ ಅಗ್ರಹಾರದ ಅಧಿಕಾರಿಯೊಬ್ಬರು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ಶಶಿಕಲಾ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆಯನ್ನ ನ್ಯಾಯಾಲಯ ವಿಧಿಸಿತ್ತು. ಅಂದ್ರೆ 2017 ಫೆಬ್ರವರಿಯಲ್ಲಿ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಶಶಿಕಲಾ ಹಾಗೂ ಜೊತೆಗೆ ಇಳವರಸಿ, ಸುಧಾಕರನ್ ಕೂಡ ಜೈಲು ಪಾಲಾಗಿದ್ರು. ಶಶಿಕಲಾ ಅವರ ಶಿಕ್ಷಾವಧಿ ಇನ್ನೂ ಪೂರ್ಣವಾಗಿಲ್ಲ. ಮತ್ತೊಂದೆಡೆ ಜೈಲಿನಲ್ಲಿ ಅವರು ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲದ ಕಾರಣ ಸನ್ನಡತೆ ಆಧಾರದ ಮೇಲೂ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ.
ಈಗಾಗಲೇ ಸನ್ನಡತೆ ಆಧಾರದ ಮೇಲೆ ಕೈದಿಗಳ ರಿಲೀಸ್ ಲಿಸ್ಟ್ ರೆಡಿ..!
ಆಗಸ್ಟ್ 15 ರಂದು ಸನ್ನಡತೆ ಆಧಾರದ ಮೇಲೆ ಒಂದಿಷ್ಟು ಕೈದಿಗಳನ್ನ ರಿಲೀಸ್ ಮಾಡಲಾಗುತ್ತೆ. ಆದರೆ ಸದ್ಯ ಆ ಲಿಸ್ಟ್ನಲ್ಲಿ ಶಶಿಕಲಾ ಹೆಸರಿಲ್ಲ, ಯಾವುದೇ ಶಿಫಾರಸುಗಳನ್ನು ಜೈಲಾಧಿಕಾರಿಗಳು ಮಾಡಿಲ್ಲ. ಸಾಮಾನ್ಯವಾಗಿ ಜೈಲಿನ ಹಿರಿಯ ಅಧಿಕಾರಿಗಳೇ ಲಿಸ್ಟ್ ರೆಡಿ ಮಾಡ್ತಾರೆ. ಲಿಸ್ಟ್ ರೆಡಿ ಮಾಡಿ ಕ್ಯಾಬಿನೆಟ್ಗೆ ಕಳುಹಿಸಲಾಗುತ್ತೆ, ಅಲ್ಲಿಂದ ಒಮ್ಮೆ ಅನುಮತಿ ಸಿಕ್ಕ ಮೇಲೆ ರಾಜ್ಯಪಾಲರು ಸಹಿ ಹಾಕಬೇಕು. ಸಹಿ ಹಾಕಿದ ಮೇಲೆ ಕೈದಿಗಳನ್ನ ರಿಲೀಸ್ ಮಾಡಲಾಗುತ್ತದೆ.
ಹೇಗೆ ಬಿಡುಗಡೆ ಮಾಡಲಾಗುತ್ತದೆ..?
ಕರ್ನಾಟಕ ಜೈಲಿನ ನಿಯಮದ ಪ್ರಕಾರ, ಮೂರು ತಿಂಗಳು ಅವರ ನಡತೆಯನ್ನು ಗಮನಿಸಲಾಗುತ್ತದೆ. ಇನ್ನೂ ಒಳಗಿರುವ ಕೈದಿ ಎಷ್ಟು ಬಾರಿ ಪೆರೋಲ್ಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಜೈಲಿನಲ್ಲಿದ್ದಾಗ ಯಾವ ರೀತಿ ಕೆಲಸ ಮಾಡಿದ್ರು ಅನ್ನುವುದರ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಈ ಎಲ್ಲಾ ಆಧಾರದ ಮೇಲೆ ಕೈದಿಗಳನ್ನ ರಿಲೀಸ್ ಮಾಡಲಾಗುತ್ತೆ.
ಶಶಿಕಲಾ ಬಿಡುಗಡೆ ಯಾವಾಗ..?
ಸದ್ಯ ರೆಡಿ ಮಾಡಿದ ಲಿಸ್ಟ್ನಲ್ಲಿ ಶಶಿಕಲಾ ಹೆಸರು ಇಲ್ಲ. ಅವರ ಬಂಧನದ ದಿನದಿಂದ ಇಲ್ಲಿಯವರೆಗಿನ ಚಿತ್ರಣ ತೆಗೆದುಕೊಳ್ಳಲಾಗುತ್ತೆ. ಪೆರೋಲ್ ಹಾಗೂ ಅವರ ನಡತೆ ಎಲ್ಲವನ್ನೂ ಗಮನಿಸಿ ಆಗಸ್ಟ್ ನಂತರದಲ್ಲಿ ರಿಲೀಸ್ ಮಾಡಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಶಶಿಕಲಾ ಅವರನ್ನು ರಿಲೀಸ್ ಮಾಡಬಹುದು ಎಂದು ಕಾರಾಗೃಹ ಐಜಿ ಅನುಮತಿ ಕೊಟ್ಟರೆ, ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ಆಗಸ್ಟ್ನ ನಂತರದಲ್ಲಿ ರಿಲೀಸ್ ಮಾಡಲಾಗುತ್ತದೆ.
ಶಶಿಕಲಾ ಜೈಲಿನಲ್ಲಿ ಹೇಗಿದ್ದಾರೆ..?
ಜೈಲಿನಲ್ಲಿ ಐಷಾರಾಮಿ ಬದುಕನ್ನು ಅನುಭವಿಸಿದ ಶಶಿಕಲಾ ಸದ್ಯ, ಸಾಮಾನ್ಯ ಕೈದಿಯಂತೆ ಜೈಲಿನಲ್ಲಿ ವಾಸ ಮಾಡ್ತಿದ್ದಾರೆ. ಬಹುತೇಕವಾಗಿ ಜೈಲಿನ ಸಾಮಾನ್ಯ ಕೈದಿಗಳು ಮಾಡುವ ಊಟ, ಹಾಗೆ ಮಲಗುವ ಚಾಪೆ, ಕೈದಿಗಳು ಹಾಕುವ ಬಟ್ಟೆಗಳನ್ನು ಹಾಕ್ತಿದ್ದು, ಎಂದಿನಂತೆ ಜೈಲಿನಲ್ಲಿರುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಜೈಲಿನ ನಿಯಮಗಳನ್ನು ಉಲ್ಲಂಘನೆ ಮಾಡಿ, ಐಷಾರಾಮಿ ಬದುಕನ್ನ ಶಶಿಕಲಾ ಅನುಭವಿಸಿದ್ದರು. ಅದನ್ನು ಹಿರಿಯ ಐಪಿಎಸ್ ಅಧಿಕಾರಿ ಡಿ. ರೂಪಾ ಬಯಲಿಗೆಳೆದಿದ್ದರು.