ಬೆಂಗಳೂರು : ಬಡವರು, ನಿರ್ಗತಿಕ ರೋಗಿಗಳಿಗೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 'ವಿಐಪಿ' ರೋಗಿಗಳಿಗೆ ನೀಡುವ ಪಂಚತಾರಾ ಸೌಲಭ್ಯದ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್ ತಿಳಿಸಿದ್ದಾರೆ.
'ಈ ಟಿವಿ ಭಾರತ'ಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಡು ಬಡ ರೋಗಿಗಳಿಗೂ ಸಹ ಪಂಚತಾರಾ ಸೌಲಭ್ಯದ ಚಿಕಿತ್ಸೆ ನೀಡುತ್ತಿರುವುದರಿಂದ ಜಯದೇವ ಆಸ್ಪತ್ರೆ ಈಗ ವಿಶ್ವ ಮನ್ನಣೆ ಪಡೆದ 'ಹಾರ್ಟ್ ಹಾಸ್ಪಿಟಲ್' ಆಗಿದೆ. ಭಾರತದ ಶ್ರೇಷ್ಠ 10 ಹೃದಯ ರೋಗ ಆಸ್ಪತ್ರೆಗಳ ಪೈಕಿ ಮೊದಲ ನಂ.1 ಆಸ್ಪತ್ರೆಯಾಗಿದೆ ಎಂದು ಆಸ್ಪತ್ರೆಯ ಗಮನಾರ್ಹ ಬೆಳವಣಿಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಯುರೋಪಿಯನ್ನ ಪ್ರಸಿದ್ಧ ಹಾರ್ಟ್ ಜರ್ನಲ್ ಬೆಂಗಳೂರಿನ ಜಯದೇವ ಆಸ್ಪತ್ರೆ ವಿಶ್ವದರ್ಜೆಯ ಶ್ರೇಷ್ಠ ಆಸ್ಪತ್ರೆ ಎನ್ನುವ ಮನ್ನಣೆ ನೀಡಿದೆ. ಯಾವುದೇ ರೋಗಿ ಬಂದರೂ 'ಟ್ರೀಟ್ಮೆಂಟ್ ಫಸ್ಟ್, ಪೇಮೆಂಟ್ ನೆಕ್ಸ್ಟ್' ಹ್ಯೂಮ್ಯಾನಿಟಿ ಈಸ್ ಪ್ರಯಾರಿಟಿ ಅನ್ನೋ ಘೋಷ ವಾಕ್ಯದಡಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಆಸ್ಪತ್ರೆ ಜನಮನ್ನಣೆ ಪಡೆದಿದೆ ಎಂದರು.
ಜಯದೇವ ಆಸ್ಪತ್ರೆ ಶೇ.500ರಷ್ಟು ಅಭಿವೃದ್ಧಿ ಹೊಂದಿದೆ. 700 ಹಾಸಿಗೆ ಸೌಲಭ್ಯವುಳ್ಳ ಆಸ್ಪತ್ರೆಯನ್ನು 1,000 ಬೆಡ್ ಸಾಮರ್ಥ್ಯದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಇನ್ಫೋಸಿಸ್ ಫೌಂಡೇಶನ್ನ ಸುಧಾಮೂರ್ತಿಯವರು ಮತ್ತು ನಾರಾಯಣಮೂರ್ತಿಯವರು 300 ಹಾಸಿಗೆಗಳ ಸೌಲಭ್ಯದ ಆಸ್ಪತ್ರೆ ಕಟ್ಟಡ ನಿರ್ಮಿಸಿಕೊಡುತ್ತಿದ್ದಾರೆ. ಒಂದೂವರೆ ವರ್ಷದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.
ಮೈಸೂರಿನಲ್ಲಿನ ಜಯದೇವ ಆಸ್ಪತ್ರೆ ಸಹ ಅತ್ಯುತ್ತಮ ಸೇವೆ ನೀಡುತ್ತಿದೆ. ಸುಸಜ್ಜಿತ ಹೃದಯ ರೋಗ ಆಸ್ಪತ್ರೆಯಾಗಿ ಅದು ಹೊರಹೊಮ್ಮಿದೆ. ಕಲ್ಬುರ್ಗಿಯಲ್ಲಿ ಸಹ ಸಾರ್ವಜನಿಕರಿಗೆ ಹೃದಯ ರೋಗ ಆರೋಗ್ಯ ಸೇವೆ ನೀಡಲಾಗುತ್ತಿದೆ. 240 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ರೂಪರೇಶೆ ಸಿದ್ಧಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.