ಬೆಂಗಳೂರು: ಡಿ.ಜೆ ಹಳ್ಳಿ ವ್ಯಾಪ್ತಿಯಲ್ಲಿ ನಡೆದಿರುವ ಗಲಭೆ ಪೂರ್ವ ನಿಯೋಜಿತವಾಗಿದ್ದು, ಇದರಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳ ವಿರುದ್ಧ ಗೂಂಡಾಕಾಯ್ದೆಯಡಿ ಕಾನೂರು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಡಿಜಿ ಹಾಗೂ ಕಾನೂನು ಸುವ್ಯವಸ್ಥೆ ಎಡಿಜಿಪಿ ಜೊತೆ ಮಾತನಾಡಿದ್ದೇನೆ. ಕಾವಲ್ ಭೈರಸಂದ್ರ, ಕೆ.ಜೆ ಹಳ್ಳಿ ಸದ್ಯ ನಿಯಂತ್ರಣದಲ್ಲಿದೆ. ಈ ಸಂಬಂಧ ಎಲ್ಲ ಮಾಹಿತಿ ಪಡೆದುಕೊಂಡಿದ್ದೇನೆ ಎಂದರು.
ಘಟನೆ ನೋಡಿದರೆ ಪೂರ್ವ ನಿಯೋಜಿತ ಎನಿಸುತ್ತದೆ. ಶಾಸಕರ ಸಂಬಂಧಿ ಏನೋ ಸಂದೇಶ ಹಾಕಿದರೆ ಅದಕ್ಕೆ ಪ್ರತಿಯಾಗಿ ದೂರು ನೀಡಬಹುದಿತ್ತು, ಕೋರ್ಟ್ಗೆ ಹೋಗ ಬಹುದಿತ್ತು, ಅವರ ಸಮುದಾಯದ ನಾಯಕರ ಜೊತೆ ಮಾತನಾಡಬಹುದಿತ್ತು. ಆದರೆ ಅದೆಲ್ಲವನ್ನೂ ಬಿಟ್ಟು ರಾತ್ರಿ ವೇಳೆ ಕಾದು ಇಂತಹ ಘಟನೆ ನಡೆಸಿದ್ದಾರೆ. ಪೊಲೀಸ್ ಠಾಣೆ ಮೇಲೆಯೂ ದಾಳಿ ಮಾಡಿದ್ದಾರೆ. ಇವರು ಹೇಡಿಗಳು, ಇವರನ್ನು ಮಟ್ಟಹಾಕುತ್ತೇವೆ ಯಾರನ್ನೂ ಬಿಡುವುದಿಲ್ಲ ಎಂದರು. ದುಷ್ಕರ್ಮಿಗಳ ಬಂಧನಕ್ಕೆ ಈಗಾಗಲೇ ಸೂಚನೆ ನೀಡಿದ್ದೇವೆ.
ಪೊಲೀಸ್ ವಾಹನಗಳೇ ಕಿಡಿಗೇಡಿಗಳ ಟಾರ್ಗೆಟ್: ಡಿಸಿಪಿ ಭೀಮಾಶಂಕರ್ ಕಾರು ಜಖಂ!
ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ದಂಡಂ ದಶಗುಣಂ ಅಗತ್ಯವಿದೆ. ಪುಂಡಾಟ ಮಾಡಿದವರು ದೇಶದ್ರೋಹಿಗಳು, ಪೊಲೀಸ್ ಠಾಣೆಗೆ ಬೆಂಕಿ ಹಾಕಿರುವುದು ದೇಶದ್ರೋಹದ ಕೆಲಸ. ರಾಜ್ಯದಲ್ಲಿ ಇದೇ ಮೊದಲ ಸಲ ಇಂತಹ ಘಟನೆ ನಡೆದಿದೆ.
ಇದು ಏಕಾಏಕಿ ಆದ ಕಾರಣ ಆರಂಭದಲ್ಲಿ ಸ್ವಲ್ಪ ಗಲಿಬಿಲಿ ಆಗಿದ್ದು ನಿಜ. ಆದರೆ ಪೊಲೀಸರು ಕೈಕಟ್ಟಿ ಕುಳಿತುಕೊಂಡಿಲ್ಲ. ನಮ್ಮ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ರಸ್ತೆಗಳ ನಾಕಾಬಂಧಿ ಹಾಕಲಾಗಿದೆ. ಹಿಂದೆ ಆ ಭಾಗದಲ್ಲಿ ಕೆಲಸ ಮಾಡಿದ್ದ ಅಧಿಕಾರಿಗಳನ್ನು ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದೆ.
ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದಿದ್ದಾರೆ. ಬೆಳಗ್ಗೆ ಮತ್ತಷ್ಟು ಪೊಲೀಸ್ ಪಡೆ ತರಿಸಲಾಗುತ್ತದೆ.ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಇರುವ ಪಡೆ ಕರೆಸಿಕೊಳ್ಳಲಾಗುತ್ತದೆ ಎಂದರು.
ಯಾರು ಬೆಂಕಿ ಹಾಕಿದ್ದಾರೋ, ಕಲ್ಲು ಎಸೆದು ದಾಂಧಲೆ ನಡೆಸಿದ್ದಾರೋ ಎಲ್ಲರ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವುದು ಖಚಿತ. ಯಾರನ್ನೂ ಬಿಡಲ್ಲ, ಯಾರ ಕೈವಾಡ ಇದೆ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತದೆ, ಸಾವಿರಾರು ಜನ ಹೀಗೆ ಏಕಾಏಕಿ ಸೇರುತ್ತಾರೆ ಎಂದರೆ ಯಾವುದಾದರೂ ಸಂಘಟನೆಯ ಬೆಂಬಲ ಇರಲೇಬೇಕು, ದುಷ್ಕರ್ಮಿಗಳ ಬಂಧಿಸಿ ವಿಚಾರಣೆ ನಡೆಸಿದ ನಂತರ ಯಾವ ಸಂಘಟನೆ ಕೆಲಸ ಮಾಡಿದೆ. ಇದರ ಹಿಂದೆ ಏನಿದೆ ಎಂದು ತಿಳಿದು ಬರಲಿದೆ ಎಂದರು.