ಬೆಂಗಳೂರು : ಖಾತೆ ಮಾಡಿಕೊಡಲು 70 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಕೋನಪ್ಪನ ಅಗ್ರಹಾರ ಗ್ರಾಮ ಪಂಚಾಯಿತಿಯ ಗ್ರಾಮ ಲೆಕ್ಕಾಧಿಕಾರಿ ಜತ್ತಪ್ಪ ಬಂಧಿತ ಆರೋಪಿ. ಹೆಚ್ ಎಂ ಪ್ರಕಾಶ್ ಎಂಬುವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ದೂರುದಾರ ಪ್ರಕಾಶ್ ಮೃತ ಸಹೋದರನ ಮಗಳ ಹೆಸರಲ್ಲಿ ಪೌತಿ ಖಾತೆ ಮಾಡಿಕೊಡಲು ಗ್ರಾಮ ಲೆಕ್ಕಾಧಿಕಾರಿ ಎರಡು ಲಕ್ಷ ರೂ.ಗೆ ಬೇಡಿಕೆ ಇಟ್ಟು ಸ್ವೀಕರಿಸಿದ್ದರು. ನಂತರ 10 ಸಾವಿರ ರೂ. ಸಹ ಪಡೆದುಕೊಂಡಿದ್ದರು. ಈಗ 70 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಪೊಲೀಸರಿಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ. ಆರೋಪಿಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಲೋಕಾಯುಕ್ತ ಅಧಿಕಾರಿಯ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಂದ ಸುಲಿಗೆ ಮಾಡುತ್ತಿದ್ದ ಆರೋಪಿ ಬಂಧನ
ಲೋಕಾಯುಕ್ತ ಅಧಿಕಾರಿ ಸೋಗಿನಲ್ಲಿ ಸುಲಿಗೆ : ಪ್ರತ್ಯೇಕ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಯ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿಯ ಪೂರ್ವ ವಿಭಾಗದ ಸಂಘಟಿತ ಅಪರಾಧ ದಳದ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದರು. ಆಂಧ್ರಪ್ರದೇಶ ಮೂಲದ ಶ್ರೀನಾಥ್ ರೆಡ್ಡಿ ಬಂಧಿತ ಆರೋಪಿ.
ಇತ್ತೀಚೆಗೆ ಸರ್ಕಾರಿ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ್ದ ಆರೋಪಿ, ತಾನು ಲೋಕಾಯುಕ್ತ ಇನ್ಸ್ಪೆಕ್ಟರ್ ಚಂದ್ರಶೇಖರ್ ಎಂದು ಪರಿಚಯಿಸಿಕೊಂಡು ನಮ್ಮ ಎಡಿಜಿಪಿ ಸಾಹೇಬರು ಮಾತನಾಡುತ್ತಾರೆ ಎಂದು ಹೇಳಿ, ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪಿಟಿಷನ್ ಇದೆ. ಇದನ್ನು ವಿಚಾರಣೆ ಮಾಡದೆ ಮುಕ್ತಾಯಗೊಳಿಸಬೇಕಾದರೆ ಹಣ ನೀಡಬೇಕಾಗುತ್ತದೆ. ನೀವು ಹಣ ಕೊಟ್ಟರೆ ಪಿಟಿಷನ್ ಅನ್ನು ನಮ್ಮ ಟೆಕ್ನಿಕಲ್ ಟೀಂನಿಂದ ವಿಚಾರಣೆ ನಡೆಸಿ "ಬಿ" ರಿಪೋರ್ಟ್ ಸಲ್ಲಿಸಲಾಗುವುದು ಎಂದು ತಿಳಿಸಿದ್ದ. ಹಣಕ್ಕಾಗಿ ಬೇಡಿಕೆ ಇಟ್ಟು ಸರ್ಕಾರಿ ಅಧಿಕಾರಿ ಸರ್ಕಾರಿ ಕೆಲಸ ಮಾಡದಂತೆ ಮಾನಸಿಕವಾಗಿ ತೊಂದರೆ ನೀಡುತ್ತಿರುವ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯ ಹೊಣೆ ವಹಿಸಿಕೊಂಡ ಸಿಸಿಬಿ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಕೋವಿಡ್ ಅಕ್ರಮ ಆರೋಪ ; ಶಾಸಕ ಯತ್ನಾಳ್ ಹೇಳಿಕೆ ಪಡೆಯುವಂತೆ ಲೋಕಾಯುಕ್ತಕ್ಕೆ ದೂರು