ಬೆಂಗಳೂರು: ರಾಜ್ಯ ಬಿಜೆಪಿ ಪಾಳಯದಲ್ಲಿ ದೆಹಲಿ ಟೂರ್ ಪಾಲಿಟಿಕ್ಸ್ ನಡೆಯುತ್ತಿದ್ದು, ರಾಜ್ಯ ರಾಜಕಾರಣದಲ್ಲಿನ ಸಮಗ್ರ ಮಾಹಿತಿಯನ್ನು ಪುತ್ರನ ಮೂಲಕ ಹೈಕಮಾಂಡ್ಗೆ ತಲುಪಿಸುವಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಫಲರಾಗಲಿದ್ದಾರೆ.
ನಾಯಕತ್ವ ಬದಲಾವಣೆ ವದಂತಿ ನಡುವೆಯೇ ಮುಖ್ಯಮಂತ್ರಿ ಬಿಎಸ್ವೈ ಅವರ ವಿರುದ್ಧ ದೂರು ನೀಡಲು ದೆಹಲಿಗೆ ತೆರಳಿ ವರಿಷ್ಠರ ಭೇಟಿಗೆ ಅವಕಾಶ ಸಿಗದೆ ಸಚಿವ ಸಿ.ಪಿ ಯೋಗೀಶ್ವರ್ ವಾಪಸ್ಸಾದ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ. ವೈ ವಿಜಯೇಂದ್ರ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಹೈಕಮಾಂಡ್ ನಾಯಕರ ಭೇಟಿ ಮಾಡುವಲ್ಲಿಯೂ ಸಫಲರಾಗಿದ್ದಾರೆ.
ದೆಹಲಿಗೆ ಭೇಟಿ ನೀಡುತ್ತಿದ್ದಂತೆಯೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರನ್ನು ಭೇಟಿ ಮಾಡಿದ್ದ ವಿಜಯೇಂದ್ರ, ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಮಾಹಿತಿ ನೀಡಿದ್ದರು. ನಾಯಕತ್ವ ಬದಲಾವಣೆ ವದಂತಿ, ಪದೇ ಪದೆ ಸಿಎಂ ವಿರುದ್ಧ ಹೇಳಿಕೆ, ಮೂರು ಪಕ್ಷಗಳ ಸರ್ಕಾರ ಎಂದು ಸಿ.ಪಿ ಯೋಗೀಶ್ವರ್ ಹೇಳಿಕೆ ನೀಡಿ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರವನ್ನುಂಟು ಮಾಡುತ್ತಿರುವುದರ ಕುರಿತು ಮಾಹಿತಿ ನೀಡಿ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದರು.
ನಾಯಕತ್ವ ಬದಲಾವಣೆ ವದಂತಿ ಬಗ್ಗೆ ಗಮನ: ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರನ್ನು ಭೇಟಿ ಮಾಡಿ ರಾಜ್ಯ ಬಿಜೆಪಿ ಪಾಳಯದ ವಿವರ ನೀಡಿದ್ದಾರೆ. ಜಿಂದಾಲ್ ಗೆ ಭೂಮಿ ನೀಡಿಕೆ ವಿವಾದ ಇತ್ಯರ್ಥ ಮಾಡಿರುವ ಮಾಹಿತಿ ನೀಡಿದ್ದಾರೆ. ಕೋವಿಡ್ ನಿಯಂತ್ರಣಕ್ಕಾಗಿ ಬಿಡುವಿಲ್ಲದ ಕೆಲಸ ಮಾಡುತ್ತಿದ್ದರೂ ಅನಗತ್ಯವಾಗಿ ನಾಯಕತ್ವ ಬದಲಾವಣೆ ವದಂತಿ, ಸರ್ಕಾರಕ್ಕೆ ಮುಜುಗರವನ್ನುಂಟು ಮಾಡುವ ಕೆಲವರ ಪ್ರವೃತ್ತಿ ಕುರಿತು ಗಮನಕ್ಕೆ ತಂದರು.
ಸಿ.ಪಿ ಯೋಗೀಶ್ವರ್ ಮತ್ತವರ ಬೆಂಬಲಕ್ಕಿರುವವರು ಮಾಡುತ್ತಿರುವ ಕೆಲಸ ಕಾರ್ಯದ ಕುರಿತು ಸಮಗ್ರ ಮಾಹಿತಿ ನೀಡಿ ಸೂಕ್ತ ನಿರ್ದೇಶನ ನೀಡುವ ಮೂಲಕ ಯಡಿಯೂರಪ್ಪ ನಾಯಕತ್ವದ ಪರ ಹೈಕಮಾಂಡ್ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಮಾಧಾನ ವ್ಯಕ್ತಪಡಿಸಿದ ನಡ್ಡಾ : ಇದೇ ವೇಳೆ ಕೊರೊನಾ 2ನೇ ಅಲೆಯ ತೀವ್ರತೆ, ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳು, ಮಾಡಿಕೊಂಡಿರುವ ವ್ಯವಸ್ಥೆಗಳ ಕುರಿತು ಕೆಲಕಾಲ ಚರ್ಚೆ ನಡೆಸಿದರು. ಕೊರೊನಾ ಪಾಸಿಟಿವಿಟಿ ದರ ನಿಯಂತ್ರಣಕ್ಕೆ ಬರುತ್ತಿರುವುದಕ್ಕೆ ಸಮಾಧಾನ ವ್ಯಕ್ತಪಡಿಸಿದ ನಡ್ಡಾ, ಸಾವಿನ ಪ್ರಮಾಣ ಹೆಚ್ಚಿರುವುದಕ್ಕೆ ಆತಂಕ ವ್ಯಕ್ತಪಡಿಸಿದರು. ಸಾವಿನ ಪ್ರಮಾಣ ಕಡಿತವಾಗುವಂತೆ ಮತ್ತಷ್ಟು ಮುತುವರ್ಜಿಯಿಂದ ಕೆಲಸ ಮಾಡುವಂತೆ ಸಲಹೆ ನೀಡಿದರು ಎನ್ನಲಾಗ್ತಿದೆ.
ವರಿಷ್ಠರ ಭೇಟಿ ಕುರಿತು ಸ್ವತಃ ವಿಜಯೇಂದ್ರ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಇಂದು ನಮ್ಮ ಪಕ್ಷದ ಹೆಮ್ಮೆಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾದ ವೇಳೆ ‘ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಕಾರ್ಯಕರ್ತರು ಜನರ ದುಃಖ-ದುಮ್ಮಾನಗಳಿಗೆ ಸ್ಪಂದಿಸಬೇಕಾದ ರೀತಿಯ ಕುರಿತು ಅವರಿಂದ ಪಡೆದ ಸಲಹೆ, ಮಾರ್ಗದರ್ಶನ ನನ್ನಲ್ಲಿ ಇನ್ನಷ್ಟು ಉತ್ಸಾಹ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ಯಡಿಯೂರಪ್ಪ ಸಫಲ: ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಒಲವು ಹೊಂದಿದೆ ಎನ್ನುವಂತೆ ಬರುತ್ತಿದ್ದ ಸುದ್ದಿಗಳಿಗೆ ಬ್ರೇಕ್ ಹಾಕಲು ಸಿಎಂ ಯಡಿಯೂರಪ್ಪ ಸೂಚನೆ ಮೇರೆಗೆ ವಿಜಯೇಂದ್ರ ದೆಹಲಿಗೆ ತೆರಳಿದ್ದು, ಸಿಎಂ ನೀಡಿದ್ದ ಸಂದೇಶಗಳನ್ನು ತಲುಪಿಸಿದ್ದಾರೆ. ಕುರ್ಚಿ ಭದ್ರಕ್ಕೆ ಬೇಕಾದ ಕೆಲಸವನ್ನು ಪುತ್ರನ ಮೂಲಕ ಹೈಕಮಾಂಡ್ ಮಟ್ಟದಲ್ಲಿ ಮಾಡುವಲ್ಲಿ ಯಡಿಯೂರಪ್ಪ ಸಫಲರಾಗಿದ್ದಾರೆ ಎನ್ನಲಾಗುತ್ತಿದೆ.
ಸಚಿವ ಸಿ.ಪಿ ಯೋಗೀಶ್ವರ್ ಭೇಟಿಗೆ ಅವಕಾಶ ನೀಡದ ಹೈಕಮಾಂಡ್ ನಾಯಕರು ಯಡಿಯೂರಪ್ಪ ಪುತ್ರನಿಗೆ ಸಮಯಾವಕಾಶ ನೀಡಿ ಮಾತುಕತೆ ನಡೆಸಿದ್ದಾರೆ ಇದು ಹೈಕಮಾಂಡ್ ಮಟ್ಟದಲ್ಲಿ ಯಡಿಯೂರಪ್ಪ ಹೊಂದಿರುವ ಬಲಕ್ಕೆ ನಿದರ್ಶನವಾಗಿದೆ. ರಾಜಕೀಯ ವಿರೋಧಿಗಳಿಗೂ ಹೈಕಮಾಂಡ್ ಒಲವು ತಮ್ಮ ಕಡೆಗೆ ಇದೆ ಎನ್ನುವ ಪರೋಕ್ಷ ಸಂದೇಶವನ್ನು ಯಡಿಯೂರಪ್ಪ ನೀಡಿದ್ದಾರೆ.