ಬೆಂಗಳೂರು: ಮಸ್ಕಿ ಕ್ಷೇತ್ರದ ಶಿಕಾರಿಗೆ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ತೆರಳಿದ್ದಾರೆ. ಎರಡು ಕ್ಷೇತ್ರ ಗೆದ್ದ ಆತ್ಮವಿಶ್ವಾಸದಲ್ಲಿರುವ ಸಿಎಂ ಪುತ್ರನಿಗೆ ಮಸ್ಕಿ ಗೆಲುವು ಅಷ್ಟು ಸುಲಭವೇನಲ್ಲ. ಕಾಂಗ್ರೆಸ್ ಭದ್ರಕೋಟೆಯಲ್ಲಿ ವಿಜಯ ಪತಾಕೆ ಹಾರಿಸುವುದು ನಿಜಕ್ಕೂ ಕಬ್ಬಿಣದ ಕಡಲೆ ಎನ್ನುವ ಲೆಕ್ಕಾಚಾರವಿದೆ.
ರಾಜ್ಯದಲ್ಲಿ ಉಪ ಚುನಾವಣಾ ಕಣ ರಂಗೇರಿದೆ. ಮಸ್ಕಿ ಕ್ಷೇತ್ರದಲ್ಲಿ ಆಡಳಿತಾರೂಢ ಬಿಜೆಪಿ ಹಾಗು ಪ್ರತಿಪಕ್ಷ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುವ ಸನ್ನಿವೇಶ ಸೃಷ್ಟಿಯಾಗಿದೆ. ಬಿಜೆಪಿಯಲ್ಲಿ ಉಪ ಚುನಾವಣೆಯ ಉಸ್ತುವಾರಿ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರರದ್ದಾಗಿದ್ದು, ಮಸ್ಕಿ ಶಿಕಾರಿಗಾಗಿ ಈಗಾಗಲೇ ಅಖಾಡಕ್ಕಿಳಿದು ಮತ ಬೇಟೆ ಆರಂಭಿಸಿದ್ದಾರೆ.
ಕೆ.ಆರ್ ಪೇಟೆ ಮತ್ತು ಶಿರಾ ಉಪ ಚುನಾವಣೆ ಗೆದ್ದ ಆತ್ಮವಿಶ್ವಾಸದಲ್ಲಿರುವ ವಿಜಯೇಂದ್ರಗೆ ಈ ಕ್ಷೇತ್ರದ ಗೆಲುವು ಅಷ್ಟು ಸುಲಭದ್ದಲ್ಲ. ಏಕೆಂದರೆ ಈ ಹಿಂದೆ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದವರೇ ಈಗ ಪ್ರತಿಸ್ಪರ್ಧಿ. ಆಗ ಪ್ರತಿಸ್ಪರ್ಧಿ ಆಗಿದ್ದವರೇ ಈಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಒಂದು ರೀತಿಯಲ್ಲಿ ಪಕ್ಷದ ಅಭ್ಯರ್ಥಿಗಳ ಅದಲು ಬದಲಾದ ಚಿತ್ರಣದಂತಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಪ್ರತಾಪ್ಗೌಡ ಪಾಟೀಲ್ 60,387 ಮತಗಳನ್ನು ಪಡೆದಿದ್ದರೆ, ಪ್ರತಿಸ್ಪರ್ಧಿ ಬಿಜೆಪಿಯ ಬಸನಗೌಡ ತುರವಿಹಾಳ್ 60,174 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ 213 ಮತಗಳ ಅಂತರದ ಗೆಲುವು ಪಡೆದಿತ್ತು.
ಇದೀಗ ಕಾಂಗ್ರೆಸ್ನಿಂದ ಈ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ 213 ಮತಗಳ ಅಲ್ಪ ಅಂತರದ ಸೋಲನುಭವಿಸಿದ್ದ ತುರವಿಹಾಳ್ ಇದೀಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ತುರವಿಹಾಳ್ ಗೆ ವೈಯಕ್ತಿಕ ವರ್ಚಸ್ಸು ಇರುವ ಜೊತೆಗೆ ಬಿಜೆಪಿಯ ಕೆಲ ಕಾರ್ಯಕರ್ತರ ಬೆಂಬಲ, ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳು ಮತ್ತು ಕಾಂಗ್ರೆಸ್ನ ಭದ್ರಕೋಟೆ ಎನ್ನುವ ಅಂಶ ತುರವಿಹಾಳ್ಗೆ ಧನಾತ್ಮಕ ಅಂಶವಾಗಿದೆ.
ಬಿಜೆಪಿಯಿಂದ ಕಣಕ್ಕಿಳಿಯಲಿರುವ ಪ್ರತಾಪ್ ಗೌಡ ಪಾಟೀಲ್ ಪಕ್ಷದ ಹೆಸರಿನಲ್ಲಿ ಗೆದ್ದು ಬಂದಿದ್ದ ವ್ಯಕ್ತಿ. ಇವರು ಬಿಜೆಪಿ ಸಾಂಪ್ರದಾಯಿಕ ಮತಗಳನ್ನೇ ನಂಬಿಕೊಳ್ಳಬೇಕಾಗಿದೆ. ಆಪರೇಷನ್ ಕಮಲದ ವೇಳೆ ಪ್ರತಾಪ್ ಗೌಡ ಪಾಟೀಲ್ ಬಿಜೆಪಿ ಸೇರ್ಪಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ವಿರೋಧದ ನಡುವೆಯೂ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿದ್ದು, ಈಗ ಟಿಕೆಟ್ ಕೂಡಾ ನೀಡಲಾಗುತ್ತಿದೆ. ಹೀಗಾಗಿ, ಬಿಜೆಪಿ ಕಾರ್ಯಕರ್ತರ ಪಟ್ಟಿಯಲ್ಲಿ ಕೆಲವರು ತಟಸ್ಥ ನಿಲುವು ತಳೆದರೂ, ಬಿಜೆಪಿಗೆ ಹಿನ್ನಡೆ ಖಚಿತ. ಈಗಾಗಲೇ 213 ಮತಗಳಿಂದ ಕಳೆದ ಬಾರಿ ಪಕ್ಷ ಸೋತಿದ್ದು, ಈಗ ಕಾರ್ಯಕರ್ತರಲ್ಲಿ ಕೆಲವರು ತಟಸ್ಥರಾದರೆ ಮತಗಳ ಗಳಿಕೆ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಇದು ಪಕ್ಷದ ಅಭ್ಯರ್ಥಿ ಗೆಲುವಿನ ಮೇಲೆ ಪರಿಣಾಮ ಬೀರುವುದು ನಿಶ್ಚಿತ ಎನ್ನಲಾಗ್ತಿದೆ.
ಈ ಎಲ್ಲಾ ನಕಾರಾತ್ಮಕ ಅಂಶಗಳನ್ನು ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಮೀರಿ ಮುನ್ನಡೆಯಬೇಕಿದೆ. ವಲಸಿಗ ಎನ್ನುವ ಪ್ರತಾಪ್ ಗೌಡ ಪಾಟೀಲ್ ಮೇಲಿರುವ ಅಭಿಪ್ರಾಯ ಬದಲಿಸಿ ಕಾರ್ಯಕರ್ತರ ಮನದಲ್ಲಿ ಬಿಜೆಪಿ ಅಭ್ಯರ್ಥಿ ಎನ್ನುವ ಭಾವನೆಯನ್ನು ಮೂಡಿಸಬೇಕಿದೆ. ಇದರ ಜೊತೆಗೆ ಉಸ್ತುವಾರಿ ಜವಾಬ್ದಾರಿಗೆ ಕೆಲ ನಾಯಕರ ಅಸಮಾಧಾನವಿದ್ದು, ಅದನ್ನು ಮೀರಿ ಕೆಲಸ ಮಾಡಬೇಕಾದ ಅನಿವಾರ್ಯತೆ ವಿಜಯೇಂದ್ರಗೆ ಎದುರಾಗಿದೆ.
ಹೊಸಕೋಟೆಯ ಚುನಾವಣಾ ಫಲಿತಾಂಶ ಬಿಜೆಪಿ ನಾಯಕರ ಕಣ್ಮುಂದೆ ಇನ್ನೂ ಇದೆ. ಕಾಂಗ್ರೆಸ್ನಿಂದ ಬಂದ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದ ಶರತ್ ಬಚ್ಚೇಗೌಡಗೆ ಕಾಂಗ್ರೆಸ್ ಬೆಂಬಲ ಘೋಷಿಸಿತ್ತು. ಪರಿಣಾಮ ಉಪ ಚುನಾವಣೆಯಲ್ಲಿ ಶರತ್ ಬಚ್ಚೇಗೌಡಗೆ ಗೆಲುವು ಲಭಿಸಿತ್ತು. ಬಿಜೆಪಿಯ ಅಸಮಾಧಾನಿತ ಕಾರ್ಯಕರ್ತರ ಮತ ಮತ್ತು ಕಾಂಗ್ರೆಸ್ ಮತಗಳಿಂದ ಬಿಜೆಪಿಯ ರೆಬಲ್ ಅಭ್ಯರ್ಥಿ ಗೆದ್ದಿದ್ದರು. ಇದೀಗ ಮಸ್ಕಿಯಲ್ಲಿಯೂ ಅಂತಹ ಚಿತ್ರಣ ಎದುರಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಓದಿ: ಏಕವಚನದಲ್ಲಿ ಮಾತನಾಡುವುದು ಅವರ ಸಂಸ್ಕ್ರತಿ ತೋರಿಸುತ್ತದೆ.. ರೇಣುಕಾಚಾರ್ಯ ಅವರಿಗೆ ಟಾಂಗ್
ಹೊಸಕೋಟೆಯಲ್ಲಿ ಪಕ್ಷೇತರ ಎನ್ನುವ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರ ಮತ ಹಾಕಿ ಬೆಂಬಲ ನೀಡಿದ್ದರು. ಆದರೆ, ಮಸ್ಕಿಯಲ್ಲಿ ನೇರವಾಗಿ ಕಾಂಗ್ರೆಸ್ ಸೇರಿ ಪರಾಜಿತ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದಾರೆ. ಹಾಗಾಗಿ, ಕಾಂಗ್ರೆಸ್ ಎನ್ನುವ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರು ಮತ ಹಾಕದೇ ಇದ್ದರೂ, ಮತದಾನದಿಂದ ದೂರ ಉಳಿಯುವ ಸಾಧ್ಯತೆ ಇದೆ. ಇದು ಕಾಂಗ್ರೆಸ್ಗೆ ಪ್ಲಸ್ ಪಾಯಿಂಟ್ ಆಗಲಿದೆ. ಇದನ್ನು ವಿಜಯೇಂದ್ರ ಯಾವ ರೀತಿ ಪ್ಯಾಚ್ ಅಪ್ ಮಾಡುತ್ತಾರೆ, ಪ್ರತಾಪ್ ಗೌಡ ಪಾಟೀಲ್ ಪರ ಕಾರ್ಯಕರ್ತರ ಪಡೆ ಪೂರ್ಣ ಪ್ರಮಾಣದಲ್ಲಿ ಬೆಂಬಲಿಸಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಹೇಗೆ ಪರಿವರ್ತನೆ ಮಾಡಲಿದ್ದಾರೆ ಎನ್ನುವುದರ ಮೇಲೆ ಅಭ್ಯರ್ಥಿಯ ಭವಿಷ್ಯ ನಿರ್ಧಾರವಾಗಲಿದೆ.
ಘರ್ ವಾಪಸಿ: ಅಷ್ಟಕ್ಕೂ ಪ್ರತಾಪ್ ಗೌಡ ಪಾಟೀಲ್ ಮೂಲತಃ ಬಿಜೆಪಿಯವರು. 2008 ರಲ್ಲಿ ಬಿಜೆಪಿಯಿಂದ ಶಾಸಕರಾಗಿ ಗೆದ್ದಿದ್ದ ಪಾಟೀಲ್, ನಂತರ ಬಿಜೆಪಿ, ಕೆಜೆಪಿ ಕಿತ್ತಾಟದಿಂದಾಗಿ ಕಾಂಗ್ರೆಸ್ ಸೇರಿದ್ದರು. 2013 ರಲ್ಲಿ ಕಾಂಗ್ರೆಸ್ ನಿಂದಲೂ ಶಾಸಕರಾಗಿ ಆಯ್ಕೆಯಾಗುವಲ್ಲಿ ಯಶಸ್ಸು ಕಂಡಿದ್ದರು. 2018 ರಲ್ಲಿಯೂ ಕಾಂಗ್ರೆಸ್ನಿಂದ ಮರು ಆಯ್ಕೆಯಾಗಿದ್ದರು. ಈವರೆಗೆ ಸತತ ಮೂರು ಬಾರಿ ಮಸ್ಕಿಯಿಂದ ಗೆದ್ದಿರುವ ಪ್ರತಾಪ್ಗೌಡ ಪಾಟೀಲ್ ಮಾತೃಪಕ್ಷದಿಂದ ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಒಟ್ಟಿನಲ್ಲಿ ಸ್ವಪಕ್ಷೀಯ ಕೆಲ ನಾಯಕರ ವಿರೋಧದ ನಡುವೆ ಮಸ್ಕಿ ಶಿಕಾರಿಗೆ ತೆರಳಿರುವ ವಿಜಯೇಂದ್ರ, ಸ್ವಪಕ್ಷೀಯ ಕೆಲ ನಾಯಕರ ಅಸಹಕಾರ, ಅಭ್ಯರ್ಥಿ ವಿಚಾರದಲ್ಲಿ ಕೆಲ ಕಾರ್ಯಕರ್ತರ ಬೇಸರ ಹಾಗು ಹಿಂದೆ ತಮ್ಮದೇ ಪಕ್ಷದ ಅಭ್ಯರ್ಥಿಯಾಗಿದ್ದ ತುರವಿಹಾಳ್ ವಿರುದ್ಧ ಗೆಲ್ಲಬೇಕಿದೆ. ಇದರಲ್ಲಿ ಎಷ್ಟರ ಮಟ್ಟಿಗೆ ಸಫಲರಾಗಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.