ಬೆಂಗಳೂರು: ಬಸವ ಕಲ್ಯಾಣ ಕ್ಷೇತ್ರದ ಚುನಾವಣಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿದರು.
ಸಿಎಂ ಅಧಿಕೃತ ನಿವಾಸ ಕಾವೇರಿಗೆ ಸಿಎಂ ಪುತ್ರ ಬಿ.ವೈ ವಿಜಯೇಂದ್ರ ಭೇಟಿ ನೀಡಿದ್ದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ರಾಜಕೀಯ ಚರ್ಚೆ ನಡೆಸಿದರು. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಿರ್ದೇಶನದ ಮೇರೆಗೆ ಬಸವ ಕಲ್ಯಾಣ ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ವಿಜಯೇಂದ್ರ ಕ್ಷೇತ್ರದ ಪ್ರವಾಸ ಮಾಡಿ ವಿವರವನ್ನು ಸಂಗ್ರಹಿಸಿದ್ದಾರೆ. ಕ್ಷೇತ್ರದ ಸ್ಥಿತಿಗತಿ, ಪಕ್ಷದ ಪರ ಜನರ ಒಲವು, ಮತದಾರರ ಸದ್ದಯದ ಮನಸ್ಥಿತಿ ಸೇರಿದಂತೆ ಸಮಗ್ರ ಚಿತ್ರಣವನ್ನು ಸಿಎಂ ಮುಂದಿಟ್ಟಿದ್ದಾರೆ.
ನಂತರ ಮಸ್ಕಿ ಕ್ಷೇತ್ರದ ವಿವರವನ್ನೂ ಸಿಎಂ ಜೊತೆ ಹಂಚಿಕೊಂಡಿದ್ದಾರೆ. ಮಸ್ಕಿ ಸಂಭಾವ್ಯ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್, ವಿಜಯೇಂದ್ರ ಅವರೇ ಪ್ರಚಾರ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸಿಎಂಗೆ ದುಂಬಾಲು ಬಿದ್ದಿರುವ ಹಿನ್ನೆಲೆಯಲ್ಲಿ ಸಿಎಂ ಸೂಚನೆ ಮೇರೆಗೆ ಮಸ್ಕಿಗೆ ಭೇಟಿ ನೀಡಿದ್ದು, ಅಲ್ಲಿನ ಸ್ಥಿತಿಗತಿ ಕುರಿತು ಮಾಹಿತಿಯನ್ನು ವಿಜಯೇಂದ್ರ ನೀಡಿದ್ದಾರೆ.
ಅಭ್ಯರ್ಥಿಗಳ ಆಯ್ಕೆ ಕುರಿತು ಕೂಡ ಇಂದು ಅನೌಪಚಾರಿಕ ಮಾತುಕತೆ ನಡೆದಿದೆ. ಈಗಾಗಲೇ ಮಸ್ಕಿ ಕ್ಷೇತ್ರಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿರುವ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಕೋರ್ ಕಮಿಟಿ ನಿರ್ಧರಿಸಿದ್ದು, ಬಸವ ಕಲ್ಯಾಣಕ್ಕೆ ಯಾರು ಎನ್ನುವ ಸಮಾಲೋಚನೆ ನಡೆಸಲಾಯಿತು ಎನ್ನಲಾಗ್ತಿದೆ.