ಬೆಂಗಳೂರು: ವಿಧಾನ ಪರಿಷತ್ ಮತ್ತು ರಾಜ್ಯಸಭೆ ಅಭ್ಯರ್ಥಿಯಾಗಿ ಒಂದು ಸ್ಥಾನಕ್ಕೆ ತಲಾ ಐದು ಹೆಸರುಗಳನ್ನು ಕಳುಹಿಸಲು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಿದೆ.
ಪರಿಷತ್ ಸ್ಥಾನದ ಅಭ್ಯರ್ಥಿಯಾಗಿ ಬಿ.ವೈ.ವಿಜಯೇಂದ್ರ ಹೆಸರನ್ನೂ ಕಳುಹಿಸಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತ ರಾಜ್ಯಸಭೆ ಅಭ್ಯರ್ಥಿಯಾಗಿ ನಿರ್ಮಲಾ ಸೀತಾರಾಮನ್ ಹೆಸರು ಕಳುಹಿಸಲು ತೀರ್ಮಾನಿಸಲಾಗಿದೆ.
ಪರಿಷತ್ಗೆ ವಿಜಯೇಂದ್ರ ಹೆಸರು ಶಿಫಾರಸು: ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಹೆಸರನ್ನು ಪರಿಷತ್ ಸಂಭ್ಯಾವ್ಯ ಅಭ್ಯರ್ಥಿಯಾಗಿ ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ 1:5ರ ಅನುಪಾತದ ಆಧಾರದಲ್ಲಿ ಸಂಭಾವ್ಯರ ಪಟ್ಟಿ ರವಾನಿಸಲಾಗುತ್ತಿದೆ. ಈ ಹೆಸರುಗಳನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳಿಸಲಾಗುತ್ತದೆ.
ಸಂಭಾವ್ಯ ಪಟ್ಟಿಯಲ್ಲಿ ನಟ ಜಗ್ಗೇಶ್, ಲಕ್ಷ್ಮಣ ಸವದಿ, ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ, ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಎಸ್ಸಿ ಮೋರ್ಚಾ ಅಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ, ಉಪಾಧ್ಯಕ್ಷ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಗೀತಾ ವಿವೇಕಾನಂದ, ನೆ.ಲ ನರೇಂದ್ರ ಬಾಬು ಹೆಸರನ್ನು ಶಿಫಾರಸು ಮಾಡಲಾಗುವುದು.
ರಾಜ್ಯಸಭೆಗೆ ನಿರ್ಮಲಾ ಸೀತಾರಾಮನ್ ಹೆಸರು ಶಿಫಾರಸು: ರಾಜ್ಯಸಭೆ ಒಂದು ಸೀಟ್ಗೆ ಅಭ್ಯರ್ಥಿಯಾಗಿ ನಿರ್ಮಲಾ ಸೀತಾರಾಮನ್ ಹೆಸರನ್ನು ಮಾತ್ರ ಶಿಫಾರಸು ಮಾಡಲಾಗಿದೆ. ಇನ್ನೊಂದು ಸ್ಥಾನಕ್ಕೆ ಕೆ.ಸಿ ರಾಮಮೂರ್ತಿ ಸೇರಿದಂತೆ 5 ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ರಾಜ್ಯಸಭೆ ಅಭ್ಯರ್ಥಿಯಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಹೆಸರನ್ನೂ ಪ್ರಸ್ತಾಪಿಸಲಾಗಿದೆ. ಇದರ ಜೊತೆಗೆ ಲೆಹರ್ ಸಿಂಗ್ ಹೆಸರನ್ನೂ ಶಿಫಾರಸು ಮಾಡಲಾಗಿದೆ.
ಮೂರನೇ ಸ್ಥಾನಕ್ಕೆ ಕಲೆ, ಸಾಹಿತ್ಯ, ಸಿನಿಮಾ ಕ್ಷೇತ್ರದಿಂದ ಒಬ್ಬರ ಹೆಸರು ಕಳಿಸಲು ನಿರ್ಧರಿಸಿದೆ. ಅನ್ಯ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆ ಮೂರನೇ ಸೀಟಿಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ರಾಜ್ಯಸಭಾ ಮೂರನೇ ಸ್ಥಾನಕ್ಕೆ ಎರಡು ಹೆಸರು ಶಿಫಾರಸು ಮಾಡಲಾಗಿದೆ. ಇದರಲ್ಲಿ ಉದ್ಯಮಿ ಪ್ರಕಾಶ್ ಶೆಟ್ಟಿ, ಲಹರಿ ವೇಲು ಹೆಸರು ಇದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ವಿಜಯೇಂದ್ರಗೆ ಪರಿಷತ್ ಸ್ಥಾನ ಸಾಧ್ಯತೆ: ಮಂತ್ರಿಗಿರಿಗೆ ವೇದಿಕೆ ಸಜ್ಜು?