ವಿಜಯಪುರ: ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಮತ್ತು ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ನಾಯಕತ್ವದ 14 ವರ್ಷದೊಳಗಿನವರ ಕರ್ನಾಟಕ ಕ್ರಿಕೆಟ್ ತಂಡಕ್ಕೆ ವಿಜಯಪುರದ ಬಾಲಕ ಸಮರ್ಥ ವಿನಯ ಕುಲಕರ್ಣಿ ಆಯ್ಕೆಯಾಗಿದ್ದಾರೆ. ಇವರು ಬೆಂಗಳೂರಿನ ಹೆಬ್ಬಾಳದಲ್ಲಿರುವ ಜೈನ್ ಹೆರಿಟೇಜ್ ಸ್ಕೂಲ್‌ನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾರೆ. ತಂದೆ ವಿನಯ ಕುಲಕರ್ಣಿ ಬಿಎಂಆರ್‌ಸಿಎಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೂ ಕೂಡ ಬಾಲ್ಯದಲ್ಲಿ ಮಧ್ಯಮ ವೇಗದ ಬೌಲಿಂಗ್ ಹಾಗು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮೂಲಕ ಕೆಎಸ್‌ಸಿಎ ರಾಯಚೂರು ವಲಯವನ್ನು ಪ್ರತಿನಿಧಿಸಿದ್ದರು.
1ನೇ ತರಗತಿಯಿಂದ 4ನೇ ತರಗತಿವರೆಗೆ ವಿಜಯಪುರದಲ್ಲಿಯೇ ಕ್ರಿಕೆಟ್ ಅಭ್ಯಾಸ ನಡೆಸಿದ್ದ ಸಮರ್ಥ ಕುಲಕರ್ಣಿ, ಕರ್ನಾಟಕ ಕ್ರಿಕೆಟ್ ಕ್ಲಬ್ ತರಬೇತುದಾರ ಮತ್ತು ಈ ಮುನ್ನ ರಾಜ್ಯ ಬಾಲಕರ ವಿಭಾಗದಲ್ಲಿ ರಾಜ್ಯ ತಂಡಕ್ಕೆ ಆಡಿರುವ ಪ್ರಶಾಂತ ಹಜೇರಿ ಅವರಲ್ಲಿ ತರಬೇತಿ ಪಡೆದಿದ್ದಾರೆ. ನಂತರ ಬೆಳಗಾವಿಯ ಜೈನ್ ಸ್ಕೂಲ್‌ನಲ್ಲಿ 5ನೇ ತರಗತಿ ಓದಿದ್ದಾರೆ. ತಂದೆ ವಿನಯ ಕುಲಕರ್ಣಿ ಅವರಿಗೆ ಬೆಂಗಳೂರಿಗೆ ವರ್ಗಾವಣೆಯಾದ ಕಾರಣ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರು. ಅಲ್ಲದೇ, ಬೆಂಗಳೂರಿನಲ್ಲಿಯೇ 6ನೇ ತರಗತಿಯಿಂದ ಇಲ್ಲಿಯವರೆಗೆ ಜೈನ್ ಹೆರಿಟೇಜ್ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ.
ಸಮರ್ಥ ಕುಲಕರ್ಣಿ ಸ್ಪಿನ್ ಬೌಲರ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದಾರೆ. ಕೇರಳದಲ್ಲಿ ಜನವರಿ 23 ರಿಂದ ಫೆಬ್ರುವರಿ 11ರ ವರೆಗೆ ನಡೆಯಲಿರುವ ದಕ್ಷಿಣ ಭಾರತ 14 ವರ್ಷದೊಳಗಿನವರ ಬಾಲಕರ ಅಂತರ ವಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ವಿನಯ ಕುಲಕರ್ಣಿ ಮಾತನಾಡಿ, "ಪತ್ನಿ ವಿಜೇತಾ ಮಗನ ಬಗ್ಗೆ ವಿಶೇಷ ಕಾಳಜಿ ವಹಿಸಿ, ಶಿಕ್ಷಣದ ಜೊತೆಗೆ ಕ್ರಿಕೆಟ್ ಬಗ್ಗೆಯೂ ಪ್ರೋತ್ಸಾಹ ನೀಡುತ್ತಿದ್ದಾರೆ. ನಾನು ರಾಯಚೂರು ವಲಯ ಪ್ರತಿನಿಧಿಸಿದ್ದರೆ ಈಗ ಮಗ ಹೆಸರಿಗೆ ತಕ್ಕಂತೆ ತನ್ನ ಸಾಮರ್ಥ್ಯ ತೋರಿಸುತ್ತಿದ್ದಾನೆ. ಕರ್ನಾಟಕ ತಂಡದಲ್ಲಿ ಸಮರ್ಥವಾಗಿ ಸಾಧನೆ ಮಾಡಲಿದ್ದಾನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮರ್ಥ ಕುಲಕರ್ಣಿಯ ಮೊದಲ ಕೋಚ್ ಪ್ರಶಾಂತ ಹಜೇರಿ ಕೂಡ ತಮ್ಮ ಶಿಷ್ಯನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, "26 ವರ್ಷಗಳ ನಂತರ 15 ವರ್ಷದೊಳಗಿನ ರಾಜ್ಯ ತಂಡಕ್ಕೆ ವಿಜಯಪುರದ ಬಾಲಕ ಆಯ್ಕೆಯಾಗಿದ್ದಾನೆ. ನಾನೂ ಕೂಡ ಬಾಲಕರ ರಾಜ್ಯ ತಂಡದಲ್ಲಿ ಆಡಿದ್ದೇನೆ. ಈಗ ನನ್ನ ಕೈಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿ ಸಮರ್ಥ ರಾಜ್ಯ ತಂಡಕ್ಕೆ ಆಯ್ಕೆಯಾಗಿರುವುದು ತರಬೇತುದಾರನಾದ ನನ್ನ ಸಂತಸವನ್ನೂ ಇಮ್ಮಡಿಗೊಳಿಸಿದೆ" ಎಂದು ಖುಷಿ ವ್ಯಕ್ತಪಡಿಸಿದರು.
ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ನಾರಿಶಕ್ತಿ.. ನೌಕಾದಳವನ್ನು ಲೀಡ್ ಮಾಡಲಿದ್ದಾರೆ ಮಂಗಳೂರಿನ ದಿಶಾ