ಬೆಂಗಳೂರು: ಕಾವೇರಿ ವಿಚಾರವಾಗಿ ತಮಿಳುನಾಡು ಸರ್ಕಾರವನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯ, ಚೆನ್ನೈನಿಂದ ಮರಳಿದ್ದಾರೆ. ಅವರು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಲು 48 ಗಂಟೆಗಳ ಕಾಲ ಕಾದಿದ್ದರೂ ಭೇಟಿಗೆ ಅವಕಾಶ ಸಿಗಲಿಲ್ಲ. ಬೆಂಗಳೂರಿನಲ್ಲಿ ಉಂಟಾಗಿರುವ ಕುಡಿಯುವ ನೀರಿನ ಬಿಕ್ಕಟ್ಟು, ಕರ್ನಾಟಕದ ಬರ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಮನವರಿಕೆ ಮಾಡಲು ಬಯಸಿದ್ದಾಗಿ ಹೇಳಿರುವ ಲೆಹರ್ ಸಿಂಗ್ ಅವರು, ಈ ಸಮಸ್ಯೆಯನ್ನು ಪ್ರಾದೇಶಿಕ ಸಂಘರ್ಷವಾಗಿ ನೋಡುವ ಬದಲು, ಮಾನವೀಯ ನೆಲೆಯಲ್ಲಿ ಪರಿಗಣಿಸುವಂತೆ ಒತ್ತಾಯಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಗುರುವಾರ ಮಾಧ್ಯಮಗೋಷ್ಟಿಯಲ್ಲಿ ಈ ಕುರಿತು ಮಾತನಾಡಿದ ಅವರು, ನಾನು ಚೆನ್ನೈಗೆ ಹೋಗಿ ಎರಡು ದಿನಗಳ ಕಾಲ ಅಲ್ಲಿದ್ದು, ಸಿಎಂ ಸ್ಟಾಲಿನ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ನನ್ನ ಭೇಟಿಯು ರಾಜಕೀಯ ರಹಿತವಾದ ಸದ್ಭಾವನೆಯಿಂದ ಕೂಡಿದ್ದಾಗಿತ್ತು. ಕಾವೇರಿ ಸಮಸ್ಯೆಯನ್ನು ಪ್ರಾದೇಶಿಕ ಸಂಘರ್ಷವಾಗಿ ಪರಿಗಣಿಸದೆ, ಮಾನವೀಯ ನೆಲೆಯಲ್ಲಿ ನೋಡುವಂತೆ ತಮಿಳುನಾಡು ಸಿಎಂಗೆ ಮನವಿ ಮಾಡಲು ಉದ್ದೇಶಿಸಿದ್ದೆ. ದುರಾದೃಷ್ಟವಶಾತ್, 48 ಗಂಟೆಗಳ ಕಾಲ ಕಾದರೂ ಭೇಟಿ ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಆದರೂ ಡಿಎಂಕೆ ಸಂಸದರು ಮತ್ತು ತಮಿಳುನಾಡು ನಾಯಕರೊಂದಿಗೆ ಚರ್ಚೆ ನಡೆಸಿದ್ದು, ಇದು ಅತ್ಯಂತ ಸಕಾರಾತ್ಮಕವಾಗಿತ್ತು. ಡಿಎಂಕೆ ನಾಯಕರು ನಾನು ನೀಡಿದ ಸಲಹೆಗಳನ್ನು ಸ್ವೀಕರಿಸಿದರು. ಹಾಗೆಯೇ ಎರಡೂ ಸರ್ಕಾರಗಳ ನಡುವಿನ ಚರ್ಚೆಯಿಂದ ಪರಿಹಾರ ದೊರೆಯುತ್ತದೆ ಎಂಬ ಸಕಾರಾತ್ಮಕ ನಿಲುವನ್ನು ಅವರೆಲ್ಲರೂ ಹೊಂದಿದ್ದಾರೆ. ಆದ್ದರಿಂದ ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಭೇಟಿಯಾಗಿ ಮಾತುಕತೆ ನಡೆಸಿದರೆ ಕಾವೇರಿ ಬಿಕ್ಕಟ್ಟಿಗೆ ಉತ್ತಮ ಪರಿಹಾರ ಕಂಡುಕೊಳ್ಳಬಹುದು ಎಂದು ಲೆಹರ್ ಸಿಂಗ್ ಸಲಹೆ ನೀಡಿದರು.
ಮಾಜಿ ಪ್ರಧಾನಿ ದೇವೇಗೌಡರ ಸಲಹೆಗೆ ಶ್ಲಾಘನೆ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಸಲಹೆಯನ್ನು ಶ್ಲಾಘಿಸಿದ ಲೆಹರ್ ಸಿಂಗ್, ನ್ಯಾಯಾಲಯದ ಹೊರಗೆ ಈ ಸಮಸ್ಯೆಯನ್ನು ಇತ್ಯರ್ಥಪಡಿಸುವುದೇ ಉತ್ತಮ ಮಾರ್ಗವಾಗಿದ್ದು, ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಭೇಟಿಯಾಗಿ ಚರ್ಚಿಸಬೇಕು ಎಂದು ಅಭಿಪ್ರಾಯಪಟ್ಟರು. ಕರ್ನಾಟಕ ಮತ್ತು ತಮಿಳುನಾಡು ಸರ್ಕಾರದ ನಡುವಿನ ಚರ್ಚೆಯಿಂದ ಪರಿಹಾರ ದೊರೆಯಲಿದೆ ಎಂದು ಡಿಎಂಕೆ ನಾಯಕರು ಕೂಡ ನಂಬಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಈ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಸಿಎಂ ಎಂಕೆ ಸ್ಟಾಲಿನ್ ಅವರನ್ನು ಸಂಪರ್ಕಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದ ರೈತರು ಮತ್ತು ಬೆಂಗಳೂರಿನ ಹಿತದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ತಮಿಳುನಾಡು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಚರ್ಚೆ ನಡೆಸಬೇಕು ಎಂದು ಲಹರ್ ಸಿಂಗ್ ಹೇಳಿದರು.
ಇದನ್ನೂ ಓದಿ : ರಾಮನಗರದಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಆಕ್ರೋಶ- ವಿಡಿಯೋ