ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ವರದಾನವಾಗಿದ್ದ ವಿದ್ಯಾಗಮ ಯೋಜನೆ ಅನುಷ್ಠಾನದಲ್ಲಿ ಏರುಪೇರು ಆಗಿ ಸ್ಥಗಿತಗೊಂಡಿತ್ತು. ಆದರೆ ಇದೀಗ ಸರ್ಕಾರದ ಚಿತ್ತ ವಿದ್ಯಾಗಮ ಯೋಜನೆಯತ್ತ ನೆಟ್ಟಿದ್ದು, ಮತ್ತೆ ಆರಂಭವಾಗುವ ಲಕ್ಷಣ ಗೋಚರಿಸುತ್ತಿದೆ.
ವಿದ್ಯಾಗಮ ಯೋಜನೆ ಪುನರ್ ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಮಕ್ಕಳ ನಿರಂತರ ಕಲಿಕೆಗೆ ವಿದ್ಯಾಗಮ ಯೋಜನೆ ಅವಶ್ಯಕ ಎಂದು ತಿಳಿದು ಬಂದಿದೆ. ಲೋಷ-ದೋಷ ತಿದ್ದಿ ಅನುಷ್ಠಾನ ಮಾಡಲು ನಿರ್ಧಾರ ಮಾಡಲಾಗಿದ್ದು, ಸಂಕ್ರಾಂತಿ ಹಬ್ಬದ ಬಳಿಕ ಹೊಸ ರೂಪದಲ್ಲಿ ಮರು ಆರಂಭ ಮಾಡಲು ಸಿದ್ಧತೆ ನಡೆದಿದೆ. ಈಗಾಗಲೇ ಹಂತ ಹಂತವಾಗಿ ಶಾಲೆ ಆರಂಭಕ್ಕೆ ಆರೋಗ್ಯ ಇಲಾಖೆ ಕೋವಿಡ್ ಟೆಕ್ನಿಕಲ್ ಕಮಿಟಿ ಶಿಫಾರಸು ನೀಡಿದೆ. ಪ್ರೌಢ ಶಾಲೆ, ಪಿಯು ಕಾಲೇಜು ಆರಂಭಿಸುವಂತೆ ಶಿಫಾರಸು ನೀಡಿದ್ದು, ಡಿಸೆಂಬರ್ 3ನೇ ವಾರದಲ್ಲಿ ಸರ್ಕಾರ ಶಾಲಾರಂಭದ ನಿರ್ಧಾರ ತಿಳಿಸಲಿದೆ.
ಇದನ್ನೂ ಓದಿ : ಬಿಐಎಎಲ್‌ನಿಂದ ವಿಶೇಷ ಸಂಚಾರಿ ಕ್ಯಾಬಿನ್ : ಖಾಕಿ ಪಡೆಗೆ ವಿಪರೀತ ಹವಾಮಾನದಿಂದ ಸಂರಕ್ಷಣೆ
ಸುರಕ್ಷತೆಗೆ ಒತ್ತು ನೀಡಿ ಶಾಲಾ ಆವರಣದಲ್ಲಿ ವಿದ್ಯಾಗಮ ಯೋಜನೆಯಡಿ ಬೋಧನೆ ಮಾಡಲು ಚಿಂತನೆ ನಡೆದಿದೆ. ಸರ್ಕಾರಿ ಶಾಲಾ ಮಕ್ಕಳ ನಿರಂತರ ಕಲಿಕೆಗೆ ವಿದ್ಯಾಗಮ ಪರಿಣಾಮಕಾರಿಯಾಗಿದ್ದು, ಅನುಷ್ಠಾನದಲ್ಲಾದ ಕೆಲವು ದೋಷದಿಂದ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. 5ರಿಂದ 7ನೇ ತರಗತಿ ಮಕ್ಕಳಿಗೆ ದೂರದರ್ಶನದ ಮೂಲಕ ಸಂವೇದ ತರಗತಿ ಸದ್ಯ ನಡೆಯುತ್ತಿದೆ. ಆದರೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನೇರ ಮುಖಾಮುಖಿ ಆಗುತ್ತಿಲ್ಲ.
ಹೀಗಾಗಿ ನಿರಂತರ ಕಲಿಕೆಗೆ ತೊಡಕು ಆಗುತ್ತಿದ್ದು, ಆನ್‌ಲೈನ್ ಶಿಕ್ಷಣ ಸರ್ಕಾರಿ ಶಾಲಾ ಮಕ್ಕಳಿಗೆ ಗಗನ ಕುಸುಮವೇ ಆಗಿದೆ. ಹೀಗಾಗಿ ವಿದ್ಯಾಗಮವನ್ನೇ ಪರಿಷ್ಕೃತ ಮಾದರಿಯಲ್ಲಿ ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆದಿದೆ. ಇನ್ನು ಹಿರಿಯ ಪ್ರಾಥಮಿಕ, ಪ್ರೌಢ ಶಾಲಾ ತರಗತಿಗಳಿಗೆ ಅಂದರೆ 5ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಆಯಾ ತರಗತಿಗಳಲ್ಲಿ ಇರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇರಲಿದೆ. ಎಸ್ಎಸ್ಎಲ್ಸಿ ಬೋಧನೆ ಮಾಡುವ ಶಿಕ್ಷಕರು ಹೊರತುಪಡಿಸಿ ಉಳಿದ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ವಿದ್ಯಾಗಮ ಯೋಜನೆ ಅನುಷ್ಠಾನ ಹೇಗೆ ಇರಲಿದೆ?:
– ಶಾಲಾ ಆವರಣದಲ್ಲೇ ವಿದ್ಯಾಗಮದಡಿ ಬೋಧನೆ.
– ಸಾಮಾಜಿಕ ಅಂತರ, ಸುರಕ್ಷಾ ಕ್ರಮ, ಪಾಳಿ ಪದ್ಧತಿ ಅಥವಾ ದಿನಕ್ಕೊಂದು ತರಗತಿಯಂತೆ ಜಾರಿ.
– ಶಿಕ್ಷಕರ ಲಭ್ಯತೆ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅನುಷ್ಠಾನ.
– 5-9ನೇ ತರಗತಿಗಳಿಗೆ ಮೊದಲು, ಆಮೇಲೆ ಹಂತ ಹಂತವಾಗಿ ಜಾರಿ ಸಾಧ್ಯತೆ.
- ಕೆಲವು ಮಾರ್ಪಾಟುಗಳೊಂದಿಗೆ ವಿದ್ಯಾಗಮ ಅನುಷ್ಠಾನ.