ಬೆಂಗಳೂರು: ವಿಧಾನ ಪರಿಷತ್ನ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳಿಗೆ ನಡೆದ ಚುನಾವಣೆ ಮತ ಎಣಿಕೆ ದಿನಾಂಕವನ್ನು ಮುಂದೂಡಿರುವ ವಿಚಾರದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿದೆ.
ಮತ ಎಣಿಕೆ ಮುಂದೂಡಿರುವ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ನ್ಯೂಸ್ ಇಂಡಿಯಾ ವೋಟರ್ಸ್ ಫೋರಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿರುವ ಪೀಠ, ಚುನಾವಣಾ ವೇಳಾಪಟ್ಟಿಯನ್ನು ನಿರ್ಧರಿಸುವ ವಿಷಯದಲ್ಲಿ ಭಾರತೀಯ ಚುನಾವಣಾ ಆಯೋಗಕ್ಕೆ ತನ್ನದೇ ಆದ ಅಧಿಕಾರವಿದೆ. ಈ ವಿಚಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ ಮತ ಎಣಿಕೆ ದಿನಾಂಕ ಮುಂದೂಡಿಕೆಯಿಂದ ಯಾವ ಅಭ್ಯರ್ಥಿಗಳಿಗೂ ತೊಂದರೆ ಆಗುವುದಿಲ್ಲ ಎಂದು ಹೇಳಿ ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿದೆ.
ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ವಾದಿಸಿ, ರಾಜ್ಯ ಚುನಾವಣಾ ಆಯೋಗದ ಪತ್ರ ಆಧರಿಸಿ ಕೇಂದ್ರ ಚುನಾವಣಾ ಆಯೋಗ ಅಕ್ಟೋಬರ್ 31ರಂದು ಆದೇಶ ಹೊರಡಿಸಿ ನವೆಂಬರ್ 2ರಂದು ನಡೆಯಬೇಕಿದ್ದ ಮತ ಎಣಿಕೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ. ಒಮ್ಮೆ ಚುನಾವಣಾ ದಿನಾಂಕಗಳನ್ನು ಘೋಷಣೆ ಮಾಡಿದ ಬಳಿಕ ಅವುಗಳನ್ನು ಬದಲಾವಣೆ ಮಾಡುವಂತಿಲ್ಲ. ಬದಲಾಯಿಸುವುದಾದರೆ ಚುನಾವಣಾ ನಡವಳಿಕೆಯ ನಿಯಮಗಳು 1961 ಹಾಗೂ ಜನಪ್ರತಿನಿಧಿಗಳ ಕಾಯ್ದೆ 1951 ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ಸೂಚನೆ ಕೊಟ್ಟು ಕ್ರಮ ಕೈಗೊಳ್ಳಬೇಕು.
ಆಯೋಗ ಯಾವುದೇ ಸೂಚನೆ ನೀಡದೆ ಮತ ಎಣಿಕೆ ದಿನಾಂಕವನ್ನು ಏಕಾಏಕಿ ಬದಲಾವಣೆ ಮಾಡಿ ಆದೇಶಿಸಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ರಾಜಕೀಯ ಪಕ್ಷ ಅಧಿಕಾರದಲ್ಲಿದ್ದು, ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಆಯೋಗ ಅಕ್ಟೋಬರ್ 31ರಂದು ಹೊರಡಿಸಿರುವ ಆದೇಶ ರದ್ದುಪಡಿಸಿ ಶೀಘ್ರವೇ ಮತ ಎಣಿಕೆ ನಡೆಸುವಂತೆ ನಿರ್ದೇಶಿಸಬೇಕು. ಎಣಿಕೆ ನಡೆಸುವವರೆಗೆ ಮತಪೆಟ್ಟಿಗೆಗಳನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಬೇಕು ಎಂದು ಅರ್ಜಿದಾರರು ಕೋರಿದ್ದರು.