ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ (ಮರಣೋತ್ತರ) ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಾಳೆ ಸಂಜೆ ನಡೆಯಲಿದ್ದು, ಇದಕ್ಕಾಗಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಿದ್ದತಾ ಕಾರ್ಯ ನಡೆದಿದೆ. ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ರಘುನಾಥ ಮಲ್ಕಾಪುರೆ, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್, ಕರ್ನಾಟಕ ರತ್ನ ಪ್ರಶಸ್ತಿ ಉಸ್ತುವಾರಿ ಸಮಿತಿ ಅಧ್ಯಕ್ಷ ಆರ್.ಅಶೋಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್, ಸಂಸದ ಪಿ. ಸಿ ಮೋಹನ್, ಶಾಸಕ ರಿಜ್ವಾನ್ ಅರ್ಷದ್ ಭಾಗಿಯಾಗಲಿದ್ದಾರೆ. ಗಾಯಕ ವಿಜಯಪ್ರಕಾಶ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಸಚಿವರಾದ ಆರ್.ಅಶೋಕ್ ಹಾಗೂ ಸುನೀಲ್ ಕುಮಾರ್ ಸಮಾರಂಭದ ಸಿದ್ದತೆಯ ಕುರಿತು ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಆರ್.ಅಶೋಕ್, ಕಾರ್ಯಕ್ರಮಕ್ಕೆ ಸುಮಾರು 25 ಸಾವಿರ ಜನ ಸೇರುವ ಸಾಧ್ಯತೆ ಇದೆ. ಸಿನಿಮಾ ಗಣ್ಯರು, ಬೆಂಗಳೂರಿನ ನಾಗರಿಕರಿಗೆ 5 ಸಾವಿರ ಪಾಸ್ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮುಕ್ತ ಆಹ್ವಾನ: ವಿಧಾನಸೌಧದ ಮುಂಭಾಗದ ಅಂಬೇಡ್ಕರ್ ಬೀದಿ ರಸ್ತೆಯನ್ನು ಬ್ಲಾಕ್ ಮಾಡಲಾಗುತ್ತಿದೆ. ಶಕ್ತಿಸೌಧದ ಬಳಿ 10ಕ್ಕೂ ಹೆಚ್ಚು LED ಸ್ಕ್ರೀನ್ ಹಾಕಲಾಗುತ್ತಿದೆ. ಸಾರ್ವಜನಿಕರಿಗೆ ಮುಕ್ತ ಆಹ್ವಾನವಿದೆ ಎಂದು ಸಚಿವರು ಹೇಳಿದರು.
ಸಚಿವ ಸುನೀಲ್ ಕುಮಾರ್ ಮಾತನಾಡಿ, ಈ ಬಾರಿ ಪ್ರಶಸ್ತಿಯೇ ಸಾಧಕರನ್ನು ಹುಡುಕಿಕೊಂಡು ಹೋಗಿದೆ. ಪ್ರಶಸ್ತಿ ಘೋಷಣೆಯಾದ ಬಳಿಕ ಗಣ್ಯರ ಫೋಟೋಗಳನ್ನು ಕೇಳಲಾಯ್ತು. ಅನೇಕರ ಬಳಿ ಫೋಟೋನೇ ಇರಲಿಲ್ಲ. ಮೌನ ಸಾಧಕರನ್ನು ಹುಡುಕಿ ಹೊರ ತರುವ ಕೆಲಸವಾಗಿದೆ. ಹೂವಿನಹಡಗಲಿ ಪೌರಕಾರ್ಮಿಕ, ದೈವ ನರ್ತನ ಮಾಡುವವರನ್ನು, ವಿಕಲಚೇತನ ಕ್ರೀಡಾಪಟು ಅನೇಕರನ್ನು ಗುರುತಿಸಲಾಗಿದೆಎಂದು ತಿಳಿಸಿದರು.
ಇದನ್ನೂ ಓದಿ: ನಾಳೆ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ: ಸರ್ಕಾರದಿಂದ ಪುನೀತ್ ಕುಟುಂಬಕ್ಕೆ ಆಹ್ವಾನ