ಬೆಂಗಳೂರು: ಮಾರ್ಚ್ 4ರಿಂದ ಆರಂಭಗೊಂಡಿರುವ ಬಜೆಟ್ ಅಧಿವೇಶನವನ್ನು ತಿಂಗಳಾಂತ್ಯದವರೆಗೂ ನಡೆಸಲು ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡ ಬೆನ್ನಲ್ಲೇ ವಿಧಾನ ಪರಿಷತ್ ಕಲಾಪವನ್ನೂ ಮಾರ್ಚ್ 30 ರವರೆಗೂ ನಡೆಸಬೇಕು ಎನ್ನುವ ನಿರ್ಧಾರವನ್ನು ಕಲಾಪ ಸಲಹಾ ಸಮಿತಿಯಲ್ಲಿ ಕೈಗೊಳ್ಳಲಾಯಿತು.
ಭೋಜನ ವಿರಾಮದ ವೇಳೆ ಪರಿಷತ್ ಕಲಾಪ ಸಲಹಾ ಸಮಿತಿ ಸಭೆ ನಡೆಸಲಾಯಿತು. ಕಲಾಪದ ಅವಧಿ ನಿಗದಿ, ಕಾರ್ಯಕಲಾಪ ವೇಳಾಪಟ್ಟಿ ಕುರಿತು ಚರ್ಚಿಸಿ ಮಾರ್ಚ್ 30 ರವರೆಗೂ ಕಲಾಪ ನಡೆಸಬೇಕು ಎನ್ನುವ ನಿರ್ಧಾರಕ್ಕೆ ಬರಲಾಗಿದೆ.
ಬಿಎಸಿ ಸಭೆಯ ಕುರಿತು ಸದನಕ್ಕೆ ಮಾಹಿತಿ ನೀಡಿದ ಸಭಾಪತಿ ಬಸವರಾಜ ಹೊರಟ್ಟಿ, ಮಾರ್ಚ್ 30 ರವರೆಗೂ ಕಲಾಪ ನಡೆಸಬೇಕು. ಮಾರ್ಚ್ 8 ರಿಂದ 14 ರವರೆಗೆ ಪ್ರಶ್ನೋತ್ತರ, ಶೂನ್ಯವೇಳೆ, ಆಯವ್ಯಯದ ಮೇಲೆ ಚರ್ಚೆ, ಮಾರ್ಚ್ 15 ರಂದು ಬಜೆಟ್ ಮೇಲಿನ ಚರ್ಚೆಗೆ ಸರ್ಕಾರದಿಂದ ಉತ್ತರ, ಧನ ವಿನಿಯೋಗ ಮಂಡನೆ ಮಾಡಲಾಗುತ್ತದೆ.
ಮಾರ್ಚ್ 16 ರಿಂದ 30 ರವರೆಗೆ ಪ್ರಶ್ನೋತ್ತರ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆ, ನಿಯಮ 72 ,ನಿಯಮ 330, ಅರ್ಧ ಗಂಟೆ ಚರ್ಚೆ, ನಿಯಮ 68 ರ ಮೇರೆಗೆ ಚರ್ಚೆ, ವಿಧೇಯಕಗಳ ಮಂಡನೆ ಮಾಡಲಾಗುತ್ತದೆ ಎಂದು ತಿಳಿಸಿ ಸದನದ ಒಪ್ಪಿಗೆ ಕೋರಿದರು. ಸದನ ಇದಕ್ಕೆ ಸಹಮತ ಸೂಚಿಸಿತು.
ಇದನ್ನೂ ಓದಿ: ಕಳಪೆ ಗುಣಮಟ್ಟದ ಕೀಟನಾಶಕ ತಯಾರಿಕೆ, ಮಾರಾಟದ ವಿರುದ್ಧ ಕ್ರಮ: ಸಚಿವ ಬಿ.ಸಿ.ಪಾಟೀಲ್